

ಶಿಕಾರಿಪುರ: ಸೇವೆ ಎನ್ನುವುದು ಒಂದು ಸಂಕಲ್ಪ. ಒಂದು ವ್ರತ, ಸಾಮಾಜಿಕ ಕಳಕಳಿಯ ಪ್ರತಿರೂಪ ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಿಂದ ತರಲಘಟ್ಟ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ನಮ್ಮ ಸೇವೆಯನ್ನು ಅಪೇಕ್ಷಿಸುತ್ತದೆ. ಸಮಾಜದ ಋಣ ನಮ್ಮ ಮೇಲಿದೆ. ನಾವೆಲ್ಲರೂ ಸಮಾಜಮುಖಿ, ಸೇವಾ ಭಾವನೆಯಿಂದ ಸಮಾಜದ ಋಣ ಸಂದಾಯ ಮಾಡಬೇಕು ಎಂದರು.
ಸೇವೆಯನ್ನು ಮಾಡುವುದು ಸುಲಭದ ಕೆಲಸವಲ್ಲ. ಇಲ್ಲಿ ಭ್ರಾತ್ವತ್ವವನ್ನು ಬೆಳೆಸಬೇಕು. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಬೇಕು. ಸರಳ ಜೀವನದಿಂದ ಪ್ರಕೃತಿಯಿಂದ ಎಲ್ಲವನ್ನೂ ಪಡೆಯಬಹುದು. ಇದಕ್ಕಾಗಿ ಮರ, ಗಾಳಿ ಮತ್ತು ನೀರಿನ ಬಗೆಗೆ ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು.
ಸೇವಾ ಕಾರ್ಯಗಳಿಂದ ಶಿಸ್ತು, ಸಂಯಮ, ಸಮಯಪ್ರಜ್ಞೆ, ಸಮುದಾಯದಲ್ಲಿ ಪಾಲ್ಗೊಳ್ಳುವಿಕೆ, ಸಹಕಾರ ಮನೋಭಾವ ಮತ್ತಿತರ ಪರಿಕಲ್ಪನೆಗಳು ಮೂಡಿಸಿಕೊಳ್ಳುತ್ತೇವೆ. ಇವುಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನನಗಲ್ಲ ನಿನಗೆ ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಎನ್‌ಎಸ್‌ಎಸ್ ಉತ್ತಮ ವೇದಿಕೆ. ಈ ಅನುಭವ ನಿಮಗೆ ಸದಾ ಸಮಾಜ ಸೇವೆಗೆ ನಿಮ್ಮನ್ನು ಅಣಿಗೊಳಿಸಲಿ ಎಂದು ಆಶಿಸಿದರು.
ತರಲಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಹುಡುಕುವುದಕ್ಕಿಂತ ಸ್ವ ಉದ್ಯೋಗ ಮಾಡಲು ಯೋಚಿಸಬೇಕು. ಶಿಬಿರದ ಮೂಲಕ ಹಳ್ಳಿಯ ಜೀವನವನ್ನು ಪ್ರೀತಿಸುವ ಹಾಗೂ ರೈತರ ಬದುಕನ್ನು ಉನ್ನತೀಕರಿಸುವ, ಹಿರಿಯರನ್ನು ಗೌರವಿಸುವ, ಪಾಲಕರನ್ನು ಕಾಪಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಜಿ.ಎಸ್.ಶಿವಕುಮಾರ್ ಮಾತನಾಡಿ, ಇಂದು ಪ್ರಪಂಚ ಸ್ವಾರ್ಥದ ಹಿಂದೆ ಓಡುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮಾಜಿಕ, ಆರ್ಥಿಕ ಮತ್ತು ನಾಗರಿಕ ಸಮಸ್ಯೆಗಳನ್ನು ಅರಿಯುವ, ಸಹಬಾಳ್ವೆ ಮತ್ತು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ. ಮಾನವನ ಮೂರು ಮುಖ್ಯ ಮಾನಸಿಕ ರೋಗಗಳಾದ ಅಹಂಕಾರ, ಅನುಮಾನ, ಅಸೂಯೆಯನ್ನು ತೊಡೆದುಹಾಕಬೇಕು ಎಂದರು.
ತರಲಘಟ್ಟ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಜ್ಞಾನೇಶ್, ಉಪಾಧ್ಯಕ್ಷ ಕುಮಾರ್‌ನಾಯ್ಕ, ಎನ್‌ಎಸ್‌ಎಸ್ ಅಧಿಕಾರಿ ಎನ್.ಜಿ.ರವಿಕುಮಾರ್, ಗ್ರಾಮಸ್ಥರು ಇತರರಿದ್ದರು.