ಪವನ್ ಕಲ್ಯಾಣ್ ಮೂರು ಮದುವೆಯ ಬಯೋಪಿಕ್ ಸಿನಿಮಾ!; ಪ್ರತಿಕ್ರಿಯೆ ಕೊಟ್ಟ ನಟನ ಮಾಜಿ ಪತ್ನಿ ರೇಣು ದೇಸಾಯಿ

Untitled design - 2023-08-11T150514.158
Published on

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ಟಾಲಿವುಡ್​ನ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅಭಿನಯದ 'ಬ್ರೋ' ಚಿತ್ರ ಬಿಡುಗಡೆಗೊಂಡು ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು. ಇದರ ಬೆನ್ನಲ್ಲೇ ರಾಜಕೀಯ ಪಕ್ಷವೊಂದು ನಟನ ಮೂರು ವಿವಾಹಗಳ ಕುರಿತು ಬಯೋಪಿಕ್ ಚಿತ್ರ ಮಾಡುವುದಾಗಿ ತಿಳಿಸಿದೆ. ಈ ಬಗ್ಗೆ ಇದೀಗ ಪವನ್​ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.

ವೈಎಸ್‌ಆರ್‌ಸಿಪಿ ನಾಯಕ ಮತ್ತು ಆಂಧ್ರಪ್ರದೇಶದ ಸಚಿವ ಅಂಬಟಿ ರಾಂಬಾಬು ಅವರು ತಮ್ಮ ಪಕ್ಷವು ಪವನ್ ಕಲ್ಯಾಣ್ ಅವರ ಮೂರು ಮದುವೆಗಳ ಕುರಿತು ಸಿನಿಮಾ ಅಥವಾ ವೆಬ್-ಸರಣಿಯನ್ನು ಮಾಡುವುದಾಗಿ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ​ ರೇಣು ದೇಸಾಯಿ, ಪವನ್ ಕಲ್ಯಾಣ್ ಅವರ ರಾಜಕೀಯ ವಿರೋಧಿಗಳಿಗೆ ಕಳಕಳಿಯಿಂದ ಮನವಿ ಮಾಡಿದ್ದಾರೆ. "ನನ್ನ ಮಾಜಿ ಪತಿ ಪವನ್ ಕಲ್ಯಾಣ್ ನನಗೆ ಮಾಡಿದ್ದು 100 ಪ್ರತಿಶತ ತಪ್ಪು. ಮತ್ತು ಆ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಆದ್ರೆ, ನಿಮ್ಮ ರಾಜಕೀಯ ದ್ವೇಷಕ್ಕಾಗಿ ನಮ್ಮ ವೈಯಕ್ತಿಕ ಜೀವನವನ್ನು ಕೆಣಕುವುದು ಬೇಡ" ಎಂದು ಹೇಳಿದ್ದಾರೆ.

"ನಮ್ಮ ವೈಯಕ್ತಿಕ ಜೀವನವನ್ನು ಕಳಂಕಗೊಳಿಸುವ ಅಥವಾ ತೊಂದರೆ ಉಂಟುಮಾಡುವ ಯಾವುದೇ ಚಲನಚಿತ್ರ ಅಥವಾ ವೆಬ್​ ಸಿರೀಸ್​ ಅನ್ನು ಮಾಡಬೇಡಿ. ನಾವು ವೈಯಕ್ತಿಕ ನೋವನ್ನು ಬದಿಗಿಟ್ಟು, ಸಮಾಜ ಮತ್ತು ಹಿಂದುಳಿದ ಸಮುದಾಯಗಳ ದೊಡ್ಡ ಒಳಿತಿನತ್ತ ಗಮನ ಹರಿಸಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

"ಪವನ್​ ಅವರು ಖಂಡಿತ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ರಾಜಕೀಯವಾಗಿ ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ. ನಿಮ್ಮ ರಾಜಕೀಯವಿದ್ದರೆ ಅದನ್ನು ವೃತ್ತಿಪರವಾಗಿಟ್ಟುಕೊಳ್ಳಿ. ದಯವಿಟ್ಟು ನಮ್ಮ ವೈಯಕ್ತಿಕ ಬದುಕನ್ನು ತರುವುದು ಬೇಡ" ಎಂದು ರೇಣು ದೇಸಾಯಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net