

ನವದೆಹಲಿ: ವ್ಯಾಪಾರಿಗಳು ಗ್ರಾಹಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ಇಂದು, ನಿನ್ನೆಯದಲ್ಲ. ಎಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ವಂಚನೆಗೆ ಒಳಗಾಗುವವರು ಇರುತ್ತಾರೆ ಎಂಬುದು ಈ ಹಿಂದಿನಿಂದಲೂ ನಾವು ಕೇಳಿಕೊಂಡು ಬಂದಿರುವ ಮಾತು. ಒಂದು ರೀತಿ ಇದನ್ನು ವಾಡಿಕೆ ಎಂದೇ ಹೇಳಬಹುದು. ಅಂಗಡಿಯಲ್ಲಿ ಗ್ರಾಹಕರ ಕೈಸೇರುವ ವಸ್ತುಗಳಿಗೆ ನಿಗದಿಪಡಿಸಲಾದ ಎಂಆರ್ಪಿ ದರಕ್ಕಿಂತ ಹೆಚ್ಚಿನ ಹಣವನ್ನು (Fine Imposed) ವ್ಯಾಪಾರಿಗಳು ಪಡೆಯುತ್ತಾರೆ. ಇದು ಕೆಲವು ಗ್ರಾಹಕರ ಗಮನಕ್ಕೆ ಬಂದರೆ, ಬಹುತೇಕರಿಗೆ ಗೊತ್ತೇ ಆಗುವುದಿಲ್ಲ.
ಕೆಲವರು ಇದನ್ನು ಅರಿತ ತಕ್ಷಣವೇ ಧ್ವನಿ ಏರಿಸಿ ಪ್ರಶ್ನಿಸಿದರೆ, ಇನ್ನೂ ಕೆಲವರು ಕಣ್ಣಿಗೆ ಕಂಡರೂ ಸಹ ಅಯ್ಯೋ ಬಿಡು! ನಮಗ್ಯಾಕೆ ಜಗಳ, ಗೊಂದಲ ಎಲ್ಲಾ ಎಂದು ಹೇಳಿ ತಮ್ಮ ಗ್ರಾಹಕ ಹಕ್ಕನ್ನು ಕೈಚೆಲ್ಲುತ್ತಾರೆ. ಒಂದು ವಸ್ತುವಿಗೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವ ವ್ಯಾಪರಿಗಳ ನಡೆಯನ್ನು ಖಂಡಿಸುವ ಒಂದಷ್ಟು ಗ್ರಾಹಕರು, ತಾವಿರುವ ಸ್ಥಳದಲ್ಲಿ ಎಲ್ಲರಿಗೂ ತಿಳಿಯುವಂತೆ ಅದನ್ನು ಪ್ರಶ್ನಿಸುತ್ತಾರೆ. ಈ ಸಮಯದಲ್ಲಿ ವ್ಯಾಪಾರಿಗೆ ತನ್ನ ತಪ್ಪು ಅರಿವಾದರೆ, ಅಲ್ಲಿ ದಂಡ ಅಥವಾ ಹೆಚ್ಚಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ, ಇಲ್ಲೊಂದು ಘಟನೆ ಆ ರೀತಿ ನಡೆದಿಲ್ಲ. ಬದಲಿಗೆ ರೈಲ್ವೆ ಇಲಾಖೆ ಅಧಿಕಾರಿಗಳನ್ನು ತಲುಪುವ ಮಟ್ಟಕ್ಕೆ ಹೋಗಿದೆ. ಅಷ್ಟಕ್ಕೂ ಅಂತಹದ್ದೇನಾಯ್ತು? ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.
ಇತ್ತೀಚೆಗಷ್ಟೇ ಪೂಜಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು, ತಮ್ಮ ರೈಲಿನ ಪ್ರಯಾಣದಲ್ಲಿ ಕುಡಿಯುವ ನೀರು ತರುತ್ತಿದ್ದ ವ್ಯಾಪಾರಿ ಬಳಿ ನೀರಿನ ಬಾಟಲಿಯನ್ನು ಖರೀದಿಸಿದ್ದಾರೆ. ಈ ವೇಳೆ ಕೇಟರಿಂಗ್ ಸೇವೆಯ ಮೂಲಕ ಬಾಟಲಿ ಮಾರುತ್ತಿದ್ದವ 20 ರೂ. ಕೊಡಿ ಎಂದು ಬೇಡಿಕೆಯಿಟ್ಟಿದ್ದಾನೆ. ವಾಸ್ತವವಾಗಿ ಆ ನೀರಿನ ಮೂಲ ಬೆಲೆ 15 ರೂ. ಆದರೆ, ಆತ 5 ರೂ. ಹೆಚ್ಚು ತೆಗೆದುಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದ ಗ್ರಾಹಕನ ವಿರುದ್ಧವೇ ವಾದ ಮಾಡಿದ ವ್ಯಕ್ತಿ, 20 ರೂಪಾಯಿ ಕೊಟ್ಟರೆ ಮಾತ್ರ ಬಾಟಲಿ ಕೊಡುವುದಾಗಿ ಹೇಳಿದ್ದಾನೆ. ಇದರಿಂದ ಅಸಮಾಧಾನಗೊಂಡ ಗ್ರಾಹಕ, ರೈಲ್ವೆ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದ್ದಾನೆ.
5 ರೂ. ಹೆಚ್ಚಳ ಏಕೆ ಎಂಬ ಪ್ರಶ್ನೆಗೆ ನಡೆದ ಜಟಾಪಟಿಯನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡ ಗ್ರಾಹಕ, ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಯಾಣಿಕನ ಬಳಿ 5 ರೂ. ಹೆಚ್ಚು ಹಣ ಕೇಳಿದ್ದ ವ್ಯಾಪಾರಿ, 5 ರೂ.ಗಳನ್ನು ವಾಪಸ್ ನೀಡುವುದಾಗಿ ಹೇಳಿದ್ದಾನೆ. ಈ ವೇಳೆ ನನಗೆ ಮಾತ್ರವಲ್ಲ, ನೀನು ರೈಲಿನಲ್ಲಿರುವ ಇತರೆ ಪ್ರಯಾಣಿಕರಿಂದ ತೆಗೆದುಕೊಂಡ ಹಣವನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಂಆರ್ಪಿಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ವಿಷಯವನ್ನು ಗಂಭೀರವಾಗಿ ಸ್ವೀಕರಿಸಿದ ರೈಲ್ವೆ ಇಲಾಖೆ, ಗ್ರಾಹಕರು ಚಿತ್ರೀಕರಿಸಿದ್ದ ವಿಡಿಯೊವನ್ನು ಹಂಚಿಕೊಂಡು ಘಟನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಸಿದೆ. ಇಂತಹ ಘಟನೆಗಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಇದು ಕೇವಲ ರೈಲು ನಿಲ್ದಾಣಗಳಲ್ಲಿ ಮಾತ್ರವಲ್ಲದೆ ಅನೇಕ ಸ್ಥಳಗಳಲ್ಲಿ ನಡೆಯುತ್ತಿದೆ. ನೀವು ಇತರೆ ಸ್ಥಳಗಳಲ್ಲಿ ನಿಗದಿಗಿಂತ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿರುವುದನ್ನು ಗಮನಿಸಿದರೆ ತಕ್ಷಣವೇ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆಗಳಿಗೆ 1800-11-4000 ಅಥವಾ 1915ಗೆ ಕರೆ ಮಾಡಿ ದೂರು ದಾಖಲಿಸಿ ಎಂದು ತಿಳಿಸಿದೆ,(ಏಜೆನ್ಸೀಸ್).