ದಯವಿಟ್ಟು ಪಾಸ್​ ಮಾಡಿ ಸರ್​ ಇಲ್ಲಾಂದ್ರೆ ಮದ್ವೆ ಮಾಡ್ತಾರೆ! ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿ ಮನವಿ

Student 111
Published on

ಪಟನಾ: ಪ್ರಸ್ತುತ ಎಕ್ಸಾಂ ಸೀಸನ್​. ವರ್ಷವಿಡೀ ಮಾಡಿದ ಅಧ್ಯಯನಗಳ ಫಲಿತಾಂಶವನ್ನು ನಿರ್ಧರಿಸುವ ಸಮಯವಿದು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಡ್ತಿ ಪಡೆಯಬೇಕಾದರೆ, ಅಂಕಗಳೇ ಅಳತೆಗೋಲು. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಹಗಲು ರಾತ್ರಿ ಓದುತ್ತಾರೆ. ಬಹಳ ಶ್ರಮಪಟ್ಟು ಅಧ್ಯಯನ ಮಾಡಿ, ಪರೀಕ್ಷೆ ಎದುರಿಸುತ್ತಾರೆ. ಆದರೆ, ಕೆಲವರು ಯುದ್ಧ ಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಯ ಸಮಯದಲ್ಲಿ ಅಧ್ಯಯನಕ್ಕೆ ಕುಳಿತುಕೊಳ್ಳುತ್ತಾರೆ.

ಕೆಲವರು ಪರೀಕ್ಷೆಯ ಒತ್ತಡವನ್ನು ಲೆಕ್ಕಿಸದೇ ನಕಲು ಮಾಡಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಸ್ನೇಹಿತರ ಬಳಿ ಕಾಪಿ ಹೊಡೆಯುತ್ತಾರೆ. ಕೆಲವೊಂದಿಷ್ಟು ವಿದ್ಯಾರ್ಥಿಗಳಂತೂ ಉತ್ತರ ಪತ್ರಿಕೆಯಲ್ಲಿ ತಮಗೆ ಅನಿಸಿದ್ದನ್ನು ಬರೆದಿರುತ್ತಾರೆ. ಚಿತ್ರದ ಕಥೆ, ಹಾಡುಗಳು ಸೇರಿದಂತೆ ಚಿತ್ರ ವಿಚಿತ್ರವಾಗಿ ಬರೆಯುತ್ತಾರೆ. ಕೆಲವರಂತೂ ಉತ್ತರ ಪತ್ರಿಕೆಯಲ್ಲಿ ಹಣವಿಟ್ಟು ಪಾಸ್​ ಮಾಡುವಂತೆ ಕೇಳಿಕೊಂಡ ಉದಾಹರಣೆಯೂ ನಮ್ಮ ಮುಂದಿದೆ. ಸರ್ ಕನಿಷ್ಠ 35 ಅಂಕಗಳೊಂದಿಗೆ ಉತ್ತೀರ್ಣರನ್ನಾಗಿ ಮಾಡಿ, ಮಾಡದೇ ಹೋದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವ ವಿದ್ಯಾರ್ಥಿಗಳೂ ಇದ್ದಾರೆ. ಆದರೆ ಇಲ್ಲೋರ್ವ ವಿದ್ಯಾರ್ಥಿನಿ ವಿಚಿತ್ರ ಕೋರಿಕೆಯನ್ನು ಮಾಡಿದ್ದಾಳೆ. ಅವಳ ಉತ್ತರ ಪತ್ರಿಕೆಯನ್ನು ನೋಡಿದ ಶಿಕ್ಷಕರು ಕೂಡ ಶಾಕ್​ ಆಗಿದ್ದಾರೆ. ಹಾಗಾದರೆ, ವಿದ್ಯಾರ್ಥಿನಿ ಏನು ಬರೆದಿದ್ದಾಳೆ ಎಂಬುದನ್ನು ನೋಡೋಣ.

ಬಿಹಾರದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆದಿವೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ವೇಳೆ ಕೆಲ ವಿದ್ಯಾರ್ಥಿಗಳ ಮನವಿಗಳನ್ನು ನೋಡಿ ಶಿಕ್ಷಕರೇ ದಂಗಾಗಿದ್ದಾರೆ. ಒಬ್ಬ ವಿದ್ಯಾರ್ಥಿನಿಯಂತೂ ನನ್ನನ್ನು ಪಾಸ್​ ಮಾಡಿ ಎಂದು ಕೇಳಿಕೊಂಡಿದ್ದಾಳೆ. ಇದರ ಹಿಂದೆ ಒಂದು ಬಲವಾದ ಕಾರಣವೂ ಇದೆ. ಒಂದು ವೇಳೆ ಫೇಲ್ ಆದರೆ ತಂದೆ ಮದುವೆ ಮಾಡಿಬಿಡುತ್ತಾರೆ ಎಂಬ ಭಯ.

Student 1

ಸದ್ಯಕ್ಕೆ ಮದುವೆಯಾಗುವ ಬಯಕೆ ನನಗಿಲ್ಲ. ನಮ್ಮ ಕುಟುಂಬ ಕಡುಬಡತನದಿಂದ ಕೂಡಿದೆ. ತಂದೆ ಕೂಲಿ ಕಾರ್ಮಿಕನಾಗಿದ್ದು, ದಿನಕ್ಕೆ 300-400 ರೂ. ಮನೆಗೆ ತರುತ್ತಾರೆ. ಉನ್ನತ ವ್ಯಾಸಂಗ ಮಾಡಿಸಲು ಸಾಧ್ಯವಿಲ್ಲ. ಒಂದು ವೇಳೆ ಪರೀಕ್ಷೆಯಲ್ಲಿ ಫೇಲ್​ ಆದರೆ, ಅದನ್ನೇ ನೆಪ ಮಾಡಿಕೊಂಡು ನನ್ನನ್ನು ಮದುವೆ ಮಾಡಿಬಿಡುತ್ತಾರೆ. ಆದರೆ, ನನಗೆ ಮದುವೆ ಬೇಡ. ನನಗೆ ಇನ್ನೂ ಹೆಚ್ಚಿಗೆ ಓದಬೇಕೆಂಬ ಆಸೆ ಇದೆ. ದಯವಿಟ್ಟು ನನ್ನನ್ನು ಪಾಸ್ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net