ಪರಮೇಶ್ವರ ಸಿಎಂ ಆಗಲಿ ಎಂಬುದು ನಮ್ಮೆಲ್ಲರ ಆಶಯ: ರಾಜಣ್ಣ

Sahakari_Sanmana
Published on

ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ಲವಾ? ಮಣ್ಣಿನ ಮಗ ಈ ದೇಶದ ಪ್ರಧಾನಿ ಆಗಲಿಲ್ಲವೇ? ಈ ಅವಧಿಗೋ, ಇನ್ನೊಂದು ಅವಧಿಗೋ. ಈ ಅವಧಿಯಲ್ಲೇ ಅವರು ಸಿಎಂ ಆಗಬೇಕೆಂದು ನಾವು ಬಯುಸುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಆ ಮೂಲಕ ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ವಿಚಾರ ಮುನ್ನೆಲೆಗೆ ತಂದಿದ್ದಾರೆ.

ನಗರದಲ್ಲಿ ಜಿಲ್ಲಾ ಸಹಕಾರಿಗಳ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಜಿಲ್ಲೆಯ ನೂತನ ಸಚಿವರು ಹಾಗೂ ಶಾಸಕರುಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಾಕ್ಟರ್ (ಡಾ.ಜಿ.ಪರಮೇಶ್ವರ)ಗೆ ಮುಖ್ಯಮಂತ್ರಿ ಆಗೋ ಆಸೆ ಇದೆ. ಹಾಗಾಗಿ, ಅವರು ಮುಂದಿನ ಬಾರಿಯೂ ಸ್ಪರ್ಧೆ ಮಾಡಬಹುದು. ಅದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತೆ. ನಾವು ಬಯಸಿದ್ದೆಲ್ಲಾ ಸುಸೂತ್ರವಾಗಿ ಆಗಲಿ ಅಂತ ನೀವು (ಮಾಧ್ಯಮದವರು) ಸಹಕಾರ ಕೊಡಿ ಎಂದರು.

ನಾನು ಮುಂದಿನ ಚುನಾವಣೆಗೆ ಸ್ಪರ್ಧಿಸಬಾರದು ಅಂದುಕೊಂಡಿದ್ದೀನಿ. ನನಗೆ ಅನ್ನಿಸಿದಂತೆ ಸಂಸದ ಜಿ.ಎಸ್. ಬಸವರಾಜು ಕೂಡ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ. ಷಡಕ್ಷರಿ, ಜಯಣ್ಣ (ಜಯಚಂದ್ರ) ಕೂಡ ನಿಲ್ಲಲ್ಲ. ಆದರೆ, ಪರಮೇಶ್ವರ್ ಮತ್ತೊಂದು ಚುನಾವಣೆ ಎದುರಿಸಲಿದ್ದಾರೆ. ಅದಕ್ಕೆ ನಾವೆಲ್ಲರೂ ಸಹಕಾರ ಕೊಡುತ್ತೇವೆ. ಈ ಅವಧಿಗೆ ಟವೆಲ್ ಹಾಕಿದ್ದೀವಿ. ಮುಂದಿನ ಅವಧಿಗಾದರು ಅವಕಾಶ ಸಿಗಲಿ ಅಂದರಲ್ಲದೆ, ಮುಖ್ಯಮಂತ್ರಿ ಆಗೋ ಆಸೆ ಇದೆಯಾ ಅಂತಾ ಪರಮೇಶ್ವರ್‌ನ್ನು ರಾಜಣ್ಣ ಕೇಳಿದಾಗ ಪರಂ ತಲೆಯಾಡಿದ ಪ್ರಸಂಗ ನಡೆಯಿತು.

ಸಮಾರಂಭದ ಬಳಿಕ ಸುದ್ದಿಗಾರರ ಮತ್ತೆ ರಾಜಣ್ಣ ಅವರನ್ನು ನಿಮಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆಯಾ ಎಂದು ಕೆಣಕಿದಾಗ, ನೋಡಪ್ಪ ನಮ್ಮ ಜೀವಮಾನದಲ್ಲಿ ಇಲ್ಲಿಯವರೆಗೆ ಬಂದಿರೋದೆ ದೊಡ್ಡದು. ಯಾವ ದುಡ್ಡಿಲ್ಲ ಯಾವ ಜಾತಿಯಿಲ್ಲ. ನೋ ಕ್ಯಾಶ್, ನೋ ಕ್ಯಾಸ್ಟ್, ಇಲ್ಲಿ ತನಕ ಬಂದಿದಿನಿ. ನಾನು ಶಾಸಕ ಆಗ್ತೀನಿ ಅಂತ ಅನ್ಕೊಂಡಿರಲಿಲ್ಲ. ಪಟ್ಟಣ ಪಂಚಾಯಿತಿ ಆಗಬೇಕು ಅಂತ ರಾಜಕೀಯಕ್ಕೆ ಬಂದೆ. ಈಗ ಮಂತ್ರಿನೇ ಆಗಿದ್ದೇನೆ ಎಂದರು.

ಸುರೇಶ್ ಗೌಡ, ಬಸವರಾಜು, ಜ್ಯೋತಿ ಗಣೇಶ್ ನಮ್ಮ ಜೊತೆ ಕಾಣಿಸಿಕೊಳ್ಳುತ್ತಾರೆ ಅನ್ನುವ ಕಾರಣಕ್ಕೆ ಕಾಂಗ್ರೆಸ್‌ಗೆ ಬರ್ತಾರೆ ಅಂತ ಊಹೆ ಮಾಡೋಕೆ ಆಗುತ್ತಾ? ಅದೆಲ್ಲ ಇಲ್ಲ, ರಾಜಕೀಯ ನಿಂತ ನೀರಲ್ಲ. ನಾಳೆ ಬೆಳಗ್ಗೆ ನಾನು ದಳಕ್ಕೆ ಹೋಗ್ಬೇಕು ಅಂತ ಯೋಚನೆ ಮಾಡ್ತೀದಿನಿ. ನೀವು ಅದನ್ನೆಲ್ಲಾ ಜೋರಾಗಿ ಹಾಕಿ ಎಂದು ತಮ್ಮದೇ ಶೈಲಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net