ಮಕ್ಕಳಿಬ್ಬರ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿಟ್ಟು ಬದುಕಿಸಲು ಪಾಲಕರ ಹೆಣಗಾಟ? ಹಾವೇರಿಯಲ್ಲಿ ಮನಕಲಕುವ ಘಟನೆ…

haveri deth
Published on

ಹಾವೇರಿ: ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಮಕ್ಕಳಿಬ್ಬರ ಮೃತದೇಹಗಳನ್ನು ದುಃಖತಪ್ತರಾಗಿದ್ದ ಪಾಲಕರು ಮತ್ತೆ ಬದುಕಿ ಬರುತ್ತಾರೆಂಬ ಆಶಯದೊಂದಿಗೆ ಉಪ್ಪಿನಲ್ಲಿಟ್ಟು ಪರದಾಡುತ್ತಿದ್ದ ಮನ ಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹಾವೇರಿ ಜಿಲ್ಲೆ ಕಾಗಿನೆಲೆ ಸಮೀಪದ ಗ್ರಾಮದಲ್ಲಿ ಡಿ.24 ರಂದು ಹೇಮಂತ್ (12) ಮತ್ತು ನಾಗರಾಜ್ (11) ಗ್ರಾಮದ ಕೆರೆಯ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ದಡದಲ್ಲಿ ಮಕ್ಕಳ ಬಟ್ಟೆಗಳನ್ನು ನೋಡಿದ ಗ್ರಾಮಸ್ಥರು ಬಾಲಕರನ್ನು ಹುಡುಕಲು ಆರಂಭಿಸಿದ್ದರು. ಈ ವೇಳೆ ಬಾಲಕರ ಮೃತದೇಹಗಳು ಪತ್ತೆಯಾಗಿದ್ದು, ಇತ್ತೀಚಿಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಸುಳ್ಳು ವೈರಲ್ ವಿಡಿಯೋ ನೋಡಿ, ಮತ್ತೆ ಬದುಕಿ ಬರುತ್ತಾರೆಂದು ನಂಬಿದ ಪಾಲಕರು ಉಪ್ಪಿನ ರಾಶಿಯಲ್ಲಿ ಮಕ್ಕಳ ಮೃತದೇಹಗಳನ್ನು ಮುಚ್ಚಿಟ್ಟು ಬದುಕಿಸಲು ಹೆಣಗಾಟ ನಡೆಸಿದ್ದರು. ಸತತ 6 ಗಂಟೆಗಳ ಕಾಲ ಉಪ್ಪಿನ ಗುಡ್ಡೆಯಲ್ಲಿ ಮೃತದೇಹಗಳನ್ನು ಇಟ್ಟು ಬದುಕಿಸುವ ಹರಸಾಹಸ ಮಾಡಿದ್ದರು.

ಈ ವಿಚಾರ ತಿಳಿದ ಕಾಗಿನಲೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪಾಲಕರಿಗೆ ವಾಸ್ತವಿಕತೆಯ ಅರಿವು ಮೂಡಿಸಿ ಅಂತ್ಯಸಂಸ್ಕಾರ ನೆರವೇರಿಸುವಂತೆ ಮನವೊಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ಗ್ರಾಮಸ್ಥರು ಮೃತದೇಹಗಳನ್ನು ಉಪ್ಪಿನಲ್ಲಿಟ್ಟರೆ ಮರಳಿ ಬದುಕಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನು ನಂಬಿದ ಪೋಷಕರು ಉಪ್ಪಿನ ರಾಶಿಯಲ್ಲಿ ಮೃತದೇಹಗಳನ್ನಿಟ್ಟು, ಬದುಕಿ ಬರುವಂತೆ ಮೊರೆಯಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net