ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಕೇಸ್: ಸಿಬಿಐ ಅಧಿಕಾರಿಗಳಿಗೆ ಶಾಕಿಂಗ್ ಮಾಹಿತಿ ಕೊಟ್ಟ ಯುವತಿಯ ಪೋಷಕರು

ವಿಜಯವಾಣಿ - 2024-08-17T070344.931
Published on

ಕೊಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯನ್ನು ಖಂಡಿಸಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಕೈಗೊಂಡಿರುವ ಮಹಿಳಾ ವೈದ್ಯರು, ಇಂದು ದೇಶವ್ಯಾಪಿ ಮೆಡಿಕಲ್ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಬೃಹತ್ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಆಗಸ್ಟ್ 16ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಅವಧಿ ದೇಶವ್ಯಾಪಿ ತುರ್ತು ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಘವು ಘೋಷಿಸಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಉಳಿದ್ಯಾವುದು ಕೂಡ ಕಾರ್ಯನಿರ್ವಹಿಸುವುದಿಲ್ಲ. ಆ.17ರ ಬೆಳಗ್ಗೆ 6ರಿಂದ ಆ.18ರ ಬೆಳಗ್ಗೆ 6ರವರೆಗೆ ಬಹುತೇಕ ಸೇವೆಗಳು ಲಭ್ಯವಿರುವುದಿಲ್ಲ. ಇದು ಸಾರ್ವಜನಿಕರ ಗಮನದಲ್ಲಿರಲಿ ಎಂದು ನಾವು ತಿಳಿಸುತ್ತಿದ್ದೇವೆ ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೋರ್ಟ್​ ಸಿಬಿಐಗೆ ವಹಿಸಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕು ತನಿಖೆ ಕೈಗೊಂಡಿರುವ ಅಧಿಕಾರಿಗಳು, ಆಸ್ಪತ್ರೆಯ ನಾಲ್ವರು ಟ್ರೈನಿ ವೈದ್ಯರನ್ನು ಕರೆಸಿ ವಿಚಾರಣೆ ನಡೆಸಿದರು. ಇದರ ಬೆನ್ನಲ್ಲೇ ಮೃತ ಯುವತಿಯ ಪೋಷಕರು ತಮಗೆ ಆರ್​ಜಿ ಕರ್ ವೈದ್ಯಕೀಯ ಕಾಲೇಜಿನ ಕೆಲವು ಇಂಟರ್ನ್‌ಗಳು ಮತ್ತು ವೈದ್ಯರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ, ಸಿಬಿಐ ಅಧಿಕಾರಿಯೊಬ್ಬರಿಗೆ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಮಗಳ ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ಹೆಸರನ್ನು ಯುವತಿಯ ಪೋಷಕರು ಸಿಬಿಐಗೆ ನೀಡಿದ್ದಾರೆ. "ತಮ್ಮ ಮಗಳ ಮೇಲಿನ ರೇಪ್ ಮತ್ತು ಹತ್ಯೆ ಹಿಂದೆ ಅನೇಕ ಜನರ ಕೈವಾಡವಿದೆ ಎಂದು ಆಕೆಯ ಹೆತ್ತವರು ಶಂಕಿಸಿದ್ದಾರೆ. ಅವರು ಆಸ್ಪತ್ರೆಯಲ್ಲಿ ಮಗಳೊಂದಿಗೆ ಕೆಲಸ ಮಾಡಿದ ಕೆಲವು ಇಂಟರ್ನ್‌ಗಳು ಮತ್ತು ವೈದ್ಯರ ಹೆಸರನ್ನು ಕೂಡ ನೀಡಿದ್ದಾರೆ" ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net