

ನವದೆಹಲಿ: ಒಲಿಂಪಿಕ್ಸ್ ಕುಸ್ತಿ ಫೈನಲ್ ಸ್ಪರ್ಧೆಯ ದಿನ 100 ಗ್ರಾಂ ಅಧಿಕ ತೂಕದಿಂದಾಗಿ ಅನರ್ಹಗೊಂಡಿದ್ದ ವಿನೇಶ್ ಪೋಗಟ್ ಅದಕ್ಕೆ ಹಿಂದಿನ ದಿನ ರಾತ್ರಿ ತೂಕ ತಗ್ಗಿಸಿಕೊಳ್ಳಲು ಭಾರಿ ಪರಿಶ್ರಮ ಪಟ್ಟಿದ್ದರು. ಈ ಸಮಯದಲ್ಲಿನ ಕೆಲ ಕಠಿಣ ಕ್ರಮಗಳಿಂದಾಗಿ ವಿನೇಶ್ ಸಾಯುವ ಭಯವೂ ಎದುರಾಗಿತ್ತು ಎಂಬ ಆತಂಕಕಾರಿ ವಿಷಯವನ್ನು ಅವರ ಕೋಚ್ ವೊಲ್ಲರ್ ಅಕೋಸ್ ಬಹಿರಂಗಪಡಿಸಿದ್ದಾರೆ.
ಸೆಮಿಫೈನಲ್ ಪಂದ್ಯದ ಬಳಿಕ ವಿನೇಶ್ ತೂಕ 2.7 ಕೆಜಿ ಏರಿತ್ತು. ಒಂದು ಗಂಟೆ, 20 ನಿಮಿಷಗಳ ವ್ಯಾಯಾಮದ ಬಳಿಕವೂ 1.5 ಕೆಜಿ ಹೆಚ್ಚು ಇತ್ತು. ನಂತರ 50 ನಿಮಿಷ ಹಬೆಸ್ನಾನ ಮಾಡಿಸಲಾಯಿತು. ಆದರೂ ಅವರ ದೇಹದಿಂದ ಒಂದು ಹನಿ ಬೆವರು ಬರಲಿಲ್ಲ. ಮಧ್ಯರಾತ್ರಿಯಿಂದ ಬೆಳಗ್ಗೆ 5.30ರವರೆಗೆ ಕಾರ್ಡಿಯೋ ಮೆಷಿನ್ ಮತ್ತು ಕುಸ್ತಿಪಟ್ಟುಗಳನ್ನು ವಿನೇಶ್ ತೊಡಗಿಕೊಂಡಿದ್ದರು. ಈ ನಡುವೆ ವಿನೇಶ್ ಒಮ್ಮೆ ಮೂರ್ಚೆ ಹೋಗಿದ್ದರು. ಆ ವೇಳೆ ನನಗೆ ಆಕೆಯ ಸಾವಿನ ಭಯವೂ ಕಾಡಿತ್ತು ಎಂದು ಹಂಗೆರಿಯ ಅಕೋಸ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.