

ಆದರೆ ಭಗವಾನ್ ಶ್ರೀರಾಮಕೃಷ್ಣರು ಶಾಂತಿ, ನೆಮ್ಮದಿ ದೊರಕುವ ಸುಲಭವಾದ ಉಪಾಯವನ್ನು ಒಂದು ಸುಂದರ ಉದಾಹರಣೆಯ ಮೂಲಕ ನೀಡುತ್ತಾರೆ. ಅದೊಂದು ಸತ್ಸಂಗದ ಸಂದರ್ಭ. ಭಕ್ತನೋರ್ವ ಇದೇ ತೆರನಾದ ಪ್ರಶ್ನೆಯನ್ನು ಹಾಕುತ್ತಾನೆ. ಆಗ ಪರಮ ಹಂಸರು ಹೀಗೆ ತಿಳಿಸುತ್ತಾರೆ: ನೋಡು ಜಗತ್ತಿನಲ್ಲಿ ಜನರಿಗೆ ವರ್ಣಿಸಲಾ ರದ ಜಂಜಾಟ, ಅನೇಕಾನೇಕ ಕೆಲಸಕಾರ್ಯಗಳಲ್ಲಿ ಮಗ್ನರಾಗಬೇಕಿದೆ. ಪ್ರಾಪಂಚಿಕ ಕರ್ಮಗಳಿಗೆ, ಕೆಲಸಕಾರ್ಯಗಳಿಗೆ ಧುಮುಕಿದರು ಎಂದಾಕ್ಷಣ ಅಶಾಂತಿ ಉಂಟಾಗುತ್ತದೆ. ನಂತರ ಕ್ರಮೇಣ ಚಿಂತೆ, ಯೋಚನೆಗಳು ಬಂದು ಬಿಡುತ್ತವೆ.
ಶ್ರೀಮದ್ಭಾಗವತದಲ್ಲಿ ಹೇಳಿದೆ, ಅವಧೂತನ ಇಪ್ಪತ್ತನಾಲ್ಕು ಗುರುಗಳಲ್ಲಿ ಹದ್ದೂ ಒಂದು ಎಂದು. ಒಂದು ಸರೋವರದಲ್ಲಿ ಮೀನು ಗಾರರು ಮೀನು ಹಿಡಿಯುತ್ತಿದ್ದರು. ಒಂದು ಹದ್ದು ಮೇಲಿನಿಂದ ಪಕ್ಕನೆ ಕೆಳಕ್ಕೆ ಇಳಿದು ಒಂದು ಮೀನನ್ನು ಹಿಡಿದುಕೊಂಡು ಹೋಯಿತು. ಹದ್ದಿನ ಬಾಯಲ್ಲಿ ಮೀನು ಇರುವುದನ್ನು ಕಂಡು, ನೂರಾರು ಕಾಗೆಗಳು ಅದರ ಬೆನ್ನು ಹತ್ತಿ ಅದನ್ನೇ ಹಿಂಬಾಲಿಸಿಕೊಂಡು ಅದಕ್ಕೆ ಚಿತ್ರಹಿಂಸೆ ಕೊಡಲಾರಂಭಿಸಿದವು. ಹದ್ದು ಬಾಯಲ್ಲಿ ಮೀನನ್ನು ಕಚ್ಚಿಕೊಂಡು ಯಾವ ದಿಕ್ಕಿಗೆ ಹಾರಿಹೋದರೂ ಕಾಗೆಗಳು ಅದನ್ನು ಅಟ್ಟಾಡಿಸಿಕೊಂಡು ಆ ದಿಕ್ಕಿಗೇ ಹೋಗುತ್ತಿದ್ದವು. ಹದ್ದು ಮೊದಲು ದಕ್ಷಿಣ ದಿಕ್ಕಿಗೆ ಹೋಯಿತು. ಬಳಿಕ ಉತ್ತರ ದಿಕ್ಕಿಗೆ ಹೋಯಿತು. ಅಲ್ಲಿಗೂ ಅವು ಹೋದವು. ಅನಂತರ ಪೂರ್ವ-ಪಶ್ಚಿಮ ದಿಕ್ಕುಗಳಿಗೆ ಹಾರಿ ಹೋಗಲು ಯತ್ನಿಸಿದರೂ ಕಾಗೆಗಳು ಹದ್ದನ್ನು ಬಿಟ್ಟಿರಲಿಲ್ಲ. ಕೊನೆಗೆ ಹದ್ದು ದಿಗ್ಭ›ಮೆಗೊಂಡು ಸಿಕ್ಕ ಸಿಕ್ಕಲೆಲ್ಲಾ ಹಾರಿದಾಗ ಒಂದು ಕ್ಷಣದಲ್ಲಿ ಮೀನು ಬಾಯಿಂದ ಕಳಚಿಕೊಂಡು ಬಿದ್ದು ಹೋಯಿತು. ಒಡನೆಯೇ ಕಾಗೆಗಳು ಹದ್ದನ್ನು ಸುಮ್ಮನೆ ಬಿಟ್ಟು ಮೀನಿನ ಕಡೆ ಹಾರಿ ಹೋಗಲಾರಂಭಿಸಿದವು. ಹದ್ದು ಬಳಿಕ ನಿಶ್ಚಿಂತೆಯಿಂದ ಹಾರಿ ಹೋಗಿ ಒಂದು ಮರದ ಕೊಂಬೆಯ ಮೇಲೆ ಕುಳಿತು ಯೋಚಿಸ ಲಾರಂಭಿಸಿತು. ಆ ಹಾಳು ಮೀನೇ ನನ್ನ ಇಷ್ಟೊಂದು ತೊಂದರೆಗಳಿಗೆಲ್ಲಾ ಮೂಲ, ಅಬ್ಬ ಅದನ್ನು ಬಿಸಾಡಿದ ನಂತರ ಈಗ ನೆಮ್ಮದಿಯಿಂದಿದ್ದೇನೆ ಎಂದುಕೊಂಡಿತು.
ಇದನ್ನು ಹೇಳಿದ ಪರಮಹಂಸರು ಹೀಗೆ ಹೇಳುತ್ತಾರೆ: ಎಲ್ಲಿಯವರೆಗೆ ಮೀನು ಇರುವುದೋ ಅಂದರೆ ಕಾಮನೆಗಳಿರುವುದೋ, ಅಲ್ಲಿಯವರೆಗೆ ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರಬೇಕಾಗುತ್ತದೆ. ಅದರಿಂದಾಗಿ ನಾನಾ ಭಾವನೆಗಳು, ಚಿಂತೆ ಹಾಗೂ ಅಶಾಂತಿ. ಒಮ್ಮೆಲೇ ಕಾಮನಾತ್ಯಾಗವಾದೊಡೆ ಕರ್ಮ ಸಂಪೂರ್ಣ ನಾಶವಾಗಿ, ಶಾಂತಿ ನೆಮ್ಮದಿ ಲಭಿಸುತ್ತದೆ. ಅಂದರೆ ಕಾಮನಾ ಭಾವನೆಗಳು, ಆಸೆ, ಆಕಾಂಕ್ಷೆ, ತಾನು, ತನ್ನದು ಎಂಬೀ ವಿಚಾರಗಳು ತುಂಬಿರುವವರೆಗೆ ನೆಮ್ಮದಿ, ಶಾಂತಿ ದೊರೆಯುವುದು ಅತ್ಯಂತ ಕಠಿಣ. ಹಾಗೆಂದಾಕ್ಷಣ ಎಲ್ಲ ಕರ್ಮಗಳನ್ನು ಬದಿಗಿಡಬೇಕು ಎಂದಲ್ಲ. ಇಲ್ಲಿ ರಾಮಕೃಷ್ಣರು ಅತ್ಯಂತ ಸುಲಭ ಮಾರ್ಗವನ್ನು ಸೂಚಿಸುತ್ತಾರೆ, ಅದೇ ನಿರ್ಲಿಪ್ತತೆಯಿಂದ ಕರ್ತವ್ಯವನ್ನು ನಿಭಾಯಿಸುವುದು,
ನಿಷ್ಕಾಮ ಕರ್ಮ. ನಿಷ್ಕಾಮ ಕರ್ಮ ಒಳ್ಳೆಯದು. ಅದು ಅಶಾಂತಿಯನ್ನು ತರುವುದಿಲ್ಲ. ಆದರೆ ನಿಷ್ಕಾಮದಿಂದಿರಲು ಬಹಳ ಕಠಿಣ ಎಂದು ಭಾವಿಸುತ್ತೇವೆ. ಆದರೆ ಕಾಮನೆ ನಮಗರಿವಿಲ್ಲದ ರೀತಿಯಲ್ಲಿ ಎಲ್ಲಿಂದಲೋ ನುಸುಳಿಕೊಂಡು ಬಂದು ಬಿಡುತ್ತದೆ. ಮೊದಲು ಬಹಳವಾಗಿ ಸಾಧನೆ ಮಾಡಿದ್ದರೆ, ಅದರ ಬಲದಿಂದ ಕೆಲವರ ಕೈಯಲ್ಲಿ ನಿಷ್ಕಾಮಕರ್ಮ ಸಾಧ್ಯವಾಗಬಹುದು. ಭಗವದ್ದರ್ಶನದ ನಂತರ ನಿಷ್ಕಾಮಕರ್ಮ ಅನಾಯಾಸವಾಗಿ ಕೈಗೊಳ್ಳಬಹುದು. ಈ ವಿಚಾರವನ್ನು ಚಿಂತನ-ಮಂಥನ ಮಾಡಿದಾಗ ನಮಗೆ ಅರಿಯುವುದು ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಬೇಕಾದರೆ ಕಾಮನೆಗಳನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಎಲ್ಲವೂ ಭಗವರ್ದಪಿತವಾದದ್ದು ಎಂಬ ಭಾವನೆಯಿಂದ ನಾ ಹಂ ಕರ್ತಾ, ಹರಿಃ ಕರ್ತಾ ಎಂಬ ದಿವ್ಯ ಚಿಂತನೆಯಿಂದ ಲವಶೇಷವೂ ಕಾಮನೆಗಳಿಲ್ಲದ ಹಾಗೆ ಎಚ್ಚರ ವಹಿಸಿ ದಾಗ ಮಾತ್ರ ನಿಜವಾದ ಅರ್ಥದಲ್ಲಿ ಶಾಂತಿ ನೆಮ್ಮದಿ ಲಭ್ಯ. ಮನಸ್ಸಿನಲ್ಲಿ ಅಡಗಿರುವ ಕಾಮನೆಗಳನ್ನು ದೂರವಿಡುತ್ತಾ ಬಂದಲ್ಲಿ ಒಂದು ಸಮಯದಲ್ಲಿ ಅವೆಲ್ಲವೂ ಕಳಚಿಬಿದ್ದು ಹಿಂದೆ ನರಕಯಾತನೆ ನೀಡುತ್ತಾ ಬರುತ್ತಿದ್ದ ಕಾಮನೆಗಳೆಂಬ ಕಾಗೆಗಳು ಮೀನಿನ ಹಿಂದೆ ಓಡುತ್ತವೆ.