

ಪರಮಹಂಸರು ಸಾಧನೆ ತ್ಯಾಗ ವೈರಾಗ್ಯ ಹಾಗೂ ಪರಮತತ್ತ್ವವನ್ನು ಅರಿತ ಪರಮಹಂಸರಾಗಿ ಗೋಚರಿಸುತ್ತಾರೆ. ಪರಮಹಂಸರ ವಾಣಿಯಲ್ಲಿ ಈ ಅಂಶ ವನ್ನು ಕಾಣಬಹುದು. ಈ ಪ್ರಪಂಚದಲ್ಲಿ ಎರಡು ವಿಧ ಮುಕ್ತ ಪುರುಷರಿರುವರು; ಸತ್ಯತೆಯ ಅರಿವು ಪಡೆದಾದ ಮೇಲೆ ಮೌನವಾಗಿ, ತಮಗೆ ತಾವೇ ಆನಂದವನ್ನು ಅನುಭವಿಸುವರು ಮತ್ತು ಆ ದಿವ್ಯಾನಂದ ಸತ್ಯತೆಯ ಅರಿವನ್ನು ಪಡೆದಾದ ಮೇಲೆ ಅತ್ಯಂತ ಸಂತೋಷದಿಂದ ಆ ದಿವ್ಯಾನಂದ, ಬ್ರಹ್ಮಾನಂದದ ರುಚಿಯನ್ನು ಎಲ್ಲರಿಗೂ ಹಂಚುವ ಕೆಲಸದಲ್ಲಿ ತೊಡಗಿರುವವರು. ಈ ನುಡಿಗಳು ರಾಮಕೃಷ್ಣ ಪರಮಹಂಸರಿಗೇ ಅನ್ವಯವಾಗುತ್ತದೆ ಎಂಬುದು ಮತ್ತೊಂದು ಅದ್ಭುತವಾದ ಅಂಶ.
ಹಾಗಾದಲ್ಲಿ ಹೇಗೆ ಪರಮಹಂಸರು ಪರಮಗುರು? ಈ ಅಂಶವನ್ನು ಈ ಘಟನೆಯ ಮೂಲಕ ಸ್ಪಷ್ಟವಾಗಿ ಅರಿಯಬಹುದು. ಅದೊಂದು ಸಂದರ್ಭ. ಗಿರೀಶ್ ಚಂದ್ರ ಘೊಷ್ ರಾಮಕೃಷ್ಣರ ಬಳಿ ಬಂದು ತನ್ನ ಜೀವನದ ಕಷ್ಟಕಾರ್ಪಣ್ಯಗಳನ್ನು ಮಗುವಿನಂತೆ ಹೇಳಿ ಅವರ ಪಾದಪದ್ಮಂಗಳಲ್ಲಿ ಶರಣಾಗತ ನಾಗುತ್ತಾನೆ. ಆಗ ಪರಮಹಂಸರು ಗಿರೀಶ್ ಘೊಷನಿಗೆ ಭಗವನ್ನಾಮ ಸ್ಮರಣೆಯ ಉಪಾಯ ಹೇಳುತ್ತಾರೆ. ಈಗ ನೀನು ಏನು ಮಾಡುತ್ತಿದೆಯೋ ಅದನ್ನೇ ಮಾಡಿಕೊಂಡಿರು. ಆ ಕಡೆ ಭಗವಂತ, ಈ ಕಡೆ ಸಂಸಾರ- ಹೀಗೆ ಎರಡೂ ಕಡೆ ದೃಷ್ಟಿಯನ್ನಿರಿಸಿಕೊಂಡು ನಡೆ. ನೀನು ಬೆಳಿಗ್ಗೆ- ಸಂಜೆ ಹೀಗೆ ಎರಡೂ ಹೊತ್ತು ಆತನ ಸ್ಮರಣೆ ಮನನ ಮಾಡುತ್ತಾ ಬಾ ಎನ್ನುತ್ತಾರೆ. ಗಿರೀಶ ತನ್ನ ಅಸಹಾಯಕ ಸ್ಥಿತಿಯನ್ನು ವಿವರಿಸಿ, ನಾನು ನಾಟಕದ ತಂಡವನ್ನಿಟ್ಟುಕೊಂಡು ಯಾವ ಗಳಿಗೆ, ಯಾವ ಸ್ಥಳ ಎಲ್ಲಿರುತ್ತೆನೆ ಎಂಬುದು ನನಗೇ ಅರಿವಿಲ್ಲ ಎಂದ. ಆಗ ರಾಮಕೃಷ್ಣರು, ಸರಿ, ಊಟ ಮತ್ತು ನಿದ್ರೆಯ ಮೊದಲಾದರೂ ಒಮ್ಮೆ ಭಗವನ್ನಾಮ ಸ್ಮರಿಸು ಎಂದು ವಾತ್ಸಲ್ಯದಿಂದ ಆದೇಶಿಸಿದರು. ಆಗಲೂ ಗಿರೀಶನ ಮನಸ್ಸು ಒಪ್ಪಲಿಲ್ಲ. ಸ್ವಾಮಿ, ಎಲ್ಲಿ ಯಾವಾಗ ಊಟ? ಯಾವಾಗ ನಿದ್ರೆ? ಏನು ಕೋರ್ಟಿನ ಕೇಸು? ಯಾರ ವಿಚಾರದಲ್ಲಿ ಏನು ತಿಳಿಸಬೇಕೆಂಬ ನಾನಾ ರೀತಿಯ ಗೊಂದಲ, ತುಮುಲ, ಭಯ, ಹತಾಶೆಗಳಿಂದ ಸುತ್ತುವರಿದ ನಾನು ಭಗವಂತನ ಸ್ಮರಣೆ ಹೇಗೆ ತಾನೆ ಮಾಡಲು ಸಾಧ್ಯ? ನೀವೇ ನನಗೆ ದಾರಿ ತೋರಿಸಿ ಎಂದು ಅಂಗಲಾಚಿದ. ಆಗ ಪರಮಹಂಸರು ದೃಢ ಸ್ವರದಲ್ಲಿ ನುಡಿದರು:
‘ಹಾಗೋ? ಸರಿ! ಗಿರೀಶ್ಚಂದ್ರ ನಿನ್ನ ಜವಾಬ್ಧಾರಿ ನನಗಿರಲಿ, ನಿನ್ನ ವಕಾಲತ್ತನ್ನು ನನಗೆ ಒಪ್ಪಿಸುವೆಯಾದರೆ, ನಾನು ನಿನ್ನನ್ನು ರಕ್ಷಿಸುತ್ತೇನೆ. ಹೇಳು ನಿನಗಿದು ಒಪ್ಪಿಗೆಯೇ?’ ಎಂದಾಗ ಗಿರೀಶ್ ಚಂದ್ರನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.
ವಕಾಲತ್ತು ಕೊಟ್ಟುಬಿಡುವುದು! ತನ್ನ ಇಹ-ಪರಗಳೆಲ್ಲದರ ಜವಾಬ್ಧಾರಿಯನ್ನು ರಾಮಕೃಷ್ಣರಿಗೆ ನೀಡುವುದು! ಇದಕ್ಕಿಂತ ತನಗೇನು ಬೇಕು? ಎಂಬ ಭಾವನೆಯಿಂದ ಸಾಷ್ಟಾಂಗ ನಮನವನ್ನು ಮಾಡಿದ ಗಿರೀಶ್ ಚಂದ್ರ ಘೊಷ್. ರಾಮಕೃಷ್ಣರಲ್ಲಿ ಸಂಪೂರ್ಣ ಶರಣಾಗತಿ ಹೊಂದಿದಲ್ಲಿ ಅವರೇ ಶರಣಾಗತಿ ಹೊಂದಿದವರ ಪೂರ್ಣ ಜವಾಬ್ಧಾರಿ, ಅವರ ಪರವಾಗಿ ಭಗವದ್ ಸ್ಮರಣೆ ಮಾಡುತ್ತಾರೆ ಎಂದರೆ ಪರಮಗುರು ಇವರೇ ತಾನೇ? ಹೀಗೆ, ತನ್ನನ್ನು ನಂಬಿ ಬಂದವರಿಗೆ ರಕ್ಷಣೆ ನೀಡಿ ಅಧ್ಯಾತ್ಮದ ಉತ್ತುಂಗಕ್ಕೆ ಕರೆದೊಯ್ಯುವ ಪರಮ ಗುರುವೇ ಶ್ರೀರಾಮಕೃಷ್ಣರು ಎಂಬುದನ್ನು ಈ ಘಟನೆಯಿಂದ ನಾವು ಅರಿಯಬಹುದು.