

ಅದೊಂದು ಸತ್ಸಂಗದ ಸಂದರ್ಭ. ಪರಮಹಂಸರು ಮಾಸ್ಟರ್ ಮಹಾಶಯನಿಗೆ, ‘ವೈರಾಗ್ಯ ಎಂದರೇನು? ಹೇಳು ನೋಡೋಣ’ ಎನ್ನುತ್ತಾರೆ. ಮಾಸ್ಟರ್: ‘ವೈರಾಗ್ಯವೆಂದರೆ ಕೇವಲ ಸಂಸಾರದ ಮೇಲೆ ವಿರಾಗವಲ್ಲ. ಭಗವಂತನ ಕಡೆ ಅನುರಾಗ; ಸಂಸಾರದ ಕಡೆ ವಿರಾಗ.’ ಪರಮಹಂಸರು: ‘ಹೌದು, ಸರಿಯಾಗಿ ಹೇಳಿದೆ. ಸಂಸಾರಿಗೆ ಹಣದ ಆವಶ್ಯಕತೆಯೇನೋ ಇದೆ; ಆದರೆ ಹಣಕ್ಕಾಗಿ ಹಗಲಿರುಳು ಚಿಂತಿಸಬೇಕಿಲ್ಲ. ‘ಯದೃಚ್ಛಾಲಾಭ’ - ಈ ಭಾವನೆ ಒಳ್ಳೆಯದು. ಸಂಚಯ ಮಾಡಲು ಬಹಳವಾಗಿ ಶ್ರಮಿಸಬೇಡ. ಯಾರು ಭಗವಂತನಿಗೆ ಮನಸ್ಸು, ಪ್ರಾಣಗಳನ್ನು ಅರ್ಪಿಸಿಬಿಟ್ಟಿದ್ದಾರೋ, ಯಾರು ಆತನ ಸದ್ಭಕ್ತರೋ, ಅವನಲ್ಲಿ ಸಂಪೂರ್ಣ ಶರಣಾಗತಿ ಹೊಂದಿ ಸಾಕ್ಷಾತ್ಕಾರಕ್ಕೆ ಸದಾ ಹವಣಿಸುವರೋ ಅವರೇ ಸಾಧುಗಳು.’
ಕೇಶವಚಂದ್ರಸೇನನೊಂದಿಗೆ ಸಂಭಾಷಣೆ (28-11-1883)
ಪರಮಹಂಸರು: ‘ಅವಕಾಶ ದೊರೆತಾಗ ನಿರ್ಜನ ಪ್ರದೇಶದಲ್ಲಿ ಇರಬೇಕು. ಆಗ ಹೊರಜಗತ್ತಿನೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಕೂಡದು. ಪ್ರಾಪಂಚಿಕರೊಡನೆ ಪ್ರಪಂಚದ ವಿಷಯವಾಗಿ ಒಂದು ಮಾತೂ ಆಡಕೂಡದು. ಸಾಧ್ಯವಾದರೆ ನಿರ್ಜನವಾಸ, ಇಲ್ಲದಿದ್ದರೆ ಸಾಧುಸಂಗ ಮಾಡುತ್ತಿರಬೇಕು.’
ಭಕ್ತ: ‘ಈತ ಸಾಧು ಎಂದು ಗುರುತಿಸುವ ಬಗೆ ಹೇಗೆ?’
ಪರಮಹಂಸರು: ‘ಯಾರ ಮನಸ್ಸು ಪ್ರಾಣ, ಅಂತರಾತ್ಮ ಭಗವದ್ಗತವಾಗಿದೆಯೋ ಆತನೇ ಸಾಧು. ಯಾರು ಕಾಮ-ಕಾಂಚನ ತ್ಯಾಗಿಯೋ ಆತನೇ ಸಾಧು. ಎಲ್ಲ ಸ್ತ್ರೀಯರನ್ನೂ ಮಾತೃದೃಷ್ಟಿಯಿಂದ ನೋಡುತ್ತ ಅವರನ್ನು ಪೂಜ್ಯ ಭಾವನೆಯಿಂದ ಕಾಣುವನು. ಸಾಧು ಯಾವಾಗಲೂ ಭಗವಚ್ಚಿಂತನೆಯನ್ನೇ ಮಾಡುತ್ತಾನೆ. ಭಗವತ್ಸಂಬಂಧವಾಗಿ ಹೊರತು ಬೇರೆ ಯಾವ ಮಾತನ್ನೂ ಆಡುವುದಿಲ್ಲ. ಸರ್ವಭೂತಗಳಲ್ಲಿ ಭಗವಂತನೇ ಇದ್ದಾನೆ ಎಂದರಿತು ಅವರ ಸೇವೆಯಲ್ಲಿ ಮುಳುಗಿರುತ್ತಾನೆ. ಇವು ಸಾಧುವಿನ ಲಕ್ಷಣಗಳು.’
ಇನ್ನೊಂದು ಸಂದರ್ಭದಲ್ಲಿ ಶ್ರೀಗುರುವಿನ ಬಗ್ಗೆ ಮಾತನಾಡುತ್ತ; ‘ಆದ್ದರಿಂದ ಗುರುವಿನ ಕೃಪೆ ದೊರೆತುದೇ ಆದರೆ ಹೆದರಬೇಕಿಲ್ಲ. ಆತ ನೀನು ಯಾರು, ನಿನ್ನ ಸ್ವರೂಪ ಏನು ಎಂದು ತಿಳಿಸಿಕೊಡುತ್ತಾನೆ.’ ಈ ರೀತಿಯಲ್ಲಿ ನಿಜವಾದ ಸಾಧು ಯಾರು ಎಂಬುದನ್ನು ವಿವರಿಸುತ್ತ ಸೊಗಸಾದ ಉದಾಹರಣೆ ಕೊಡುತ್ತಾರೆ.
‘ಯಾವುದು ಸತ್ಯ, ಯಾವುದು ಅಸತ್ಯ ಎಂದು ಅರಿತಾಗ ಮಾತ್ರ ಸಾಧು ಎಂಬ ವಿಚಾರವನ್ನು ಪೂರ್ಣವಾಗಿ ಅರಿತಂತೆ. ಒಂದು ರಾತ್ರಿ ಒಬ್ಬ ಬೆಸ್ತ ಹೇಳದೆ ಕೇಳದೆ ಇನ್ನೊಬ್ಬನ ತೋಟಕ್ಕೆ ನುಗ್ಗಿ ಮೀನಿಗಾಗಿ ಅಲ್ಲಿದ್ದ ಕೊಳಕ್ಕೆ ಬಲೆ ಬೀಸಿದ. ಅದು ತೋಟದ ಯಜಮಾನನಿಗೆ ಗೊತ್ತಾಗಿ, ತೋಟದ ಸುತ್ತಲೂ ಆಳುಗಳನ್ನು ನಿಲ್ಲಿಸಿ, ಪಂಜು ಹೊತ್ತಿಸಿಕೊಂಡು ಆ ಕಳ್ಳನನ್ನು ತೋಟದಲ್ಲಿ ಹುಡುಕಲಾರಂಭಿಸಿದ. ಇದನ್ನು ಕಂಡು ಆ ಬೆಸ್ತ ಮೈಗೆಲ್ಲ ಬೂದಿ ಬಳಿದುಕೊಂಡು ಸಾಧುವಿನ ವೇಷ ಧರಿಸಿ ಒಂದು ಮರದ ಕೆಳಗೆ ಕುಳಿತುಕೊಂಡುಬಿಟ್ಟ. ಆ ತೋಟದ ಯಜಮಾನ ಮತ್ತು ಆಳುಗಳು ಇಡೀ ತೋಟದಲ್ಲೆಲ್ಲ ಎಷ್ಟೊಂದು ಹುಡುಕಿದರೂ ಬೆಸ್ತ ಕಾಣಲಿಲ್ಲ. ಒಬ್ಬ ಸಾಧು ಮೈಗೆ ಬೂದಿ ಬಳಿದುಕೊಂಡು ಒಂದು ಮರದ ಕೆಳಗೆ ಧ್ಯಾನಸ್ಥನಾಗಿದ್ದುದು ಮಾತ್ರ ಅವರ ಕಣ್ಣಿಗೆ ಬಿತ್ತು. ಮಾರನೇ ದಿನ ನೆರೆಹೊರೆಯಲ್ಲೆಲ್ಲ ಸುದ್ದಿ ಹಬ್ಬಿಬಿಟ್ಟಿತು, ಒಬ್ಬ ದೊಡ್ಡ ಸಾಧು ತೋಟಕ್ಕೆ ಬಂದಿದ್ದಾನೆ ಎಂಬುದಾಗಿ. ಅನೇಕ ಜನ ಫಲಪುಷ್ಪಾದಿಗಳನ್ನೂ, ಸಿಹಿತಿಂಡಿಗಳನ್ನೂ ತೆಗೆದುಕೊಂಡು ಬಂದು ಆತನಿಗೆ ಅರ್ಪಿಸಿ ಪ್ರಣಾಮ ಮಾಡತೊಡಗಿದರು. ಅನೇಕರು ದುಡ್ಡು-ಕಾಸನ್ನೂ ಸಾಧುವಿಗೆ ಅರ್ಪಿಸತೊಡಗಿದರು.
ಆ ಬೆಸ್ತ ಭಾವಿಸಲಾರಂಭಿಸಿದ; ‘‘ಏನಾಶ್ಚರ್ಯ ಇದು! ನಾನು ನಿಜವಾದ ಸಾಧು ಅಲ್ಲ, ಆದರೂ ಜನ ನನಗೆ ಇಷ್ಟೊಂದು ಭಕ್ತಿ ತೋರಿಸುತ್ತಿದ್ದಾರೆ. ನಾನು ನಿಜವಾದ ಸಾಧು ಆದುದೇ ಆದರೆ ಖಂಡಿತವಾಗಿ ನನಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ. ಇದರಲ್ಲಿ ಯಾವ ಸಂದೇಹವೂ ಇಲ್ಲವೇ ಇಲ್ಲ.’’ ಬೂಟಾಟಿಕೆಯ ಸಾಧನೆಯಿಂದಲೇ ಇಷ್ಟೊಂದು ಆತ್ಮಜಾಗೃತಿ ಉಂಟಾಗುವಾಗ ಇನ್ನು ನಿಜವಾದ ಸಾಧನೆಯ ಮಾತೇ ಎತ್ತಬೇಕಾಗಿಲ್ಲ. ಯಾವುದು ಸತ್ಯವಾದದ್ದು,
ಯಾವುದು ಅಸತ್ಯವಾದದ್ದು ಎಂಬುದು ಗೊತ್ತಾಗಿಬಿಡುತ್ತದೆ. ಭಗವಂತನೇ ಸತ್ಯ, ಈ ಜಗತ್ತು ಅನಿತ್ಯ. ಈ ಮಹಾನ್ ತತ್ವವನ್ನು ಅರಿತು ಬಹುದೊಡ್ಡ ಸಾಧುವಾಗಿ ಪರಿವರ್ತನೆ ಹೊಂದುತ್ತಾನೆ. ಯಾರಿಗೆ ಇನ್ನೂ ಭೋಗೇಚ್ಛೆ ಇದೆಯೋ ಅವರು ಸಂಸಾರದಲ್ಲಿದ್ದೇ ಭಗವಂತನನ್ನು ಕರೆಯಲಿ. ಆದರೆ ನಿಜವಾದ ಸಂನ್ಯಾಸಿಗಳ
ವಿಷಯವೇ ಬೇರೆ. ಜೇನುಹುಳು ಹೂವನ್ನು ಬಿಟ್ಟು ಬೇರಾವುದರ ಮೇಲೂ ಕುಳಿತುಕೊಳ್ಳದು. ಚಾತಕಪಕ್ಷಿಯ ಸುತ್ತ ಬೇಕಾದಷ್ಟು ನೀರಿದೆ, ಅದು ಅದ್ಯಾವುದನ್ನೂ ಮುಟ್ಟದು. ಅದು ಕೇವಲ ಸ್ವಾತೀನಕ್ಷತ್ರದ ಮಳೆಗಾಗಿ ಬಾಯಿ ತೆರೆದು ಕಾದಿರುತ್ತದೆ. ನಿಜವಾದ ಸಾಧು ಭಗವದಾನಂದದ ಹೊರತು ಬೇರಾವುದನ್ನೂ ಅನುಭವಿಸುವುದಿಲ್ಲ. ಜೇನುಹುಳು ಕೇವಲ ಪುಷ್ಪಗಳ ಮೇಲೆ ಕುಳಿತುಕೊಳ್ಳುತ್ತದೆ, ನಿಜವಾದ ಸಂನ್ಯಾಸಿ ಜೇನುಹುಳುವಿನ ಹಾಗೆ.’
ಹೀಗೆ ಸುಂದರ ಉಪಮೆಯ ಮೂಲಕ ನಿಜವಾದ ಸಾಧುವಿನ ಬಗ್ಗೆ ಸ್ಪಷ್ಟವಾಗಿ ತಿಳಿಯಪಡಿಸುತ್ತಾರೆ. ಅವರಿಗಿಂತ ಮತ್ತೊಬ್ಬ ಮಹಾನ್ ಸಾಧುವನ್ನು ಆಧ್ಯಾತ್ಮಿಕ ಪಥದಲ್ಲಿ ಕಾಣುವುದು ವಿರಳ.
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)