

ನವದೆಹಲಿ: ಟಿಕ್ಟಾಕ್ ಸೇರಿ ಚೀನಾದ 59 ಆ್ಯಪ್ಗಳಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸೈಬರ್ ಖದೀಮರು ಟಿಕ್ಟಾಕ್ ಪ್ರೊ ಎಂಬ ನಕಲಿ ಆ್ಯಪ್ನ ಲಿಂಕ್ ಮೂಲಕ ಜನರ ಮಾಹಿತಿ ಕದಿಯುವ ಪ್ರಯತ್ನ ಮುಂದುವರಿದಿದೆ!
ಆ್ಯಪ್ ನಿಷೇಧದಿಂದಾಗಿ ಕಂಗಾಲಾಗಿರುವ ಟಿಕ್ಟಾಕ್ ಪ್ರಿಯರು ಈ ಹೊಸ ಲಿಂಕ್ ಅನ್ನು ಕ್ಲಿಕ್ ಮಾಡಿ ಸೈಬರ್ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ. ವಾಟ್ಸ್ಆ್ಯಪ್ ಮತು ಎಸ್ಎಂಎಸ್ಗಳ ಮೂಲಕ ಟಿಕ್ಟಾಕ್ ಪ್ರೋ ಅಪ್ಲಿಕೇಷನ್ ಲಿಂಕ್ಅನ್ನು ಜನರ ಮೊಬೈಲ್ಗಳಿಗೆ ರವಾನಿಸಲಾಗುತ್ತಿದೆ. ಇದರ ಮೂಲಕ ಮಾಲ್ವೇರ್ ಅನ್ನು ಮೊಬೈಲ್ಗಳಲ್ಲಿ ಗೊತ್ತಿಲ್ಲದಂತೆ ಇನ್ಸ್ಟಾಲ್ ಮಾಡಲಾಗುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಟಿಕ್ಟಾಕ್ ಪ್ರೋ ಏನು ಕೆಲಸ ಮಾಡುತ್ತದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಈ ಲಿಂಕ್ಅನ್ನು ಕ್ಲಿಕ್ ಮಾಡಿ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿರುವ ಕೆಲವರು ನೀಡಿರುವ ಮಾಹಿತಿ ಪ್ರಕಾರ, ಟಿಕ್ಟಾಕ್ ಪ್ರೋ ಸಂಪೂರ್ಣವಾಗಿ ಯಾವುದೇ ರೀತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಲಿಂಕ್ ಕ್ಲಿಕ್ ಮಾಡಿದಾಗ ಬಳಕೆದಾರರ ಫೋನ್ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸಲು ಅನುಮತಿ ಕೇಳಲಾಗುತ್ತದೆ. ಆದರೆ ಈ ಅನುಮತಿಗೆ ಒಪ್ಪಿಗೆ ಸೂಚಿಸಿ ಕ್ಲಿಕ್ ಮಾಡಲು ಯಾವುದೇ ಆಯ್ಕೆಗಳು ಅದರಲ್ಲಿಲ್ಲ. ಅದರಲ್ಲೂ ಟಿಕ್ಟಾಕ್ ಪ್ರೋ ಲಿಂಕ್ ಅನ್ನು ಯಾವುದೇ ಪ್ಲೇಸ್ಟೋರ್ ಅಥವಾ ಗೂಗಲ್ ಸ್ಟೋರ್ನಿಂದ ಕಳುಹಿಸಲಾಗುತ್ತಿಲ್ಲ.
ಬದಲಿಗೆ ಮೂರನೇ ವ್ಯಕ್ತಿಯಿಂದ ರವಾನಿಸಲಾಗುತ್ತಿದೆ. ಅಂದರೆ ಯಾರಾದರೂ ಒಬ್ಬರು ತಮ್ಮ ಮೊಬೈಲ್ಗೆ ಬಂದ ಈ ಲಿಂಕ್ಅನ್ನು ಕ್ಲಿಕ್ ಮಾಡಿದ ಕೂಡಲೇ ತಂತಾನೆ ಆ ಮೊಬೈಲ್ನಲ್ಲಿನ ಎಲ್ಲ ನಂಬರ್ಗಳಿಗೆ ಲಿಂಕ್ ಫಾರ್ವರ್ಡ್ ಆಗುತ್ತಿದ್ದು, ಈಗಾಗಲೇ ಸಾವಿರಾರು ಜನರಿಗೆ ಲಿಂಕ್ ರವಾನೆಯಾಗಿದೆ ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)