

ಸರಕು ಸಾಗಣೆಯಲ್ಲಿ ಪ್ರಮುಖ ಪಾತ್ರವಹಿಸುವವರು ಕೂಲಿ ಕಾರ್ಮಿಕರು/ಶ್ರಮಿಕರು. ಭವಿಷ್ಯದಲ್ಲಿ ಅವರ ಜಾಗವನ್ನು ರೊಬಾಟ್ಗಳು ತುಂಬಿದರೆ ಅಚ್ಚರಿ ಏನಿಲ್ಲ. ಅಮೆರಿಕದ ಎಜಿಲಿಟಿ ರೊಬಾಟಿಕ್ಸ್ ಎಂಬ ಕಂಪನಿಯೊಂದು ಇಂತಹ ರೊಬಾಟ್ಗಳನ್ನು ನಿರ್ಮಿಸತೊಡಗಿದೆ. ಅದು ನಿರ್ಮಿಸುತ್ತಿರುವ ರೊಬಾಟ್ಗಳನ್ನು ಖರೀದಿಸುವ ಮೊದಲ ಕಂಪನಿ ತಾನೆಂದು ಫೋರ್ಡ್ ಇತ್ತೀಚೆಗೆ ಘೋಷಿಸಿಕೊಂಡಿದೆ! ಅಂದ ಹಾಗೆ ಈ ರೊಬಾಟ್ನ ಹೆಸರು ಡಿಜಿಟ್.
ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ದೃಷ್ಟಿಯಿಂದ ಬಹುತೇಕ ಕಂಪನಿಗಳು ಆಟೋಮೇಷನ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂತಾದವುಗಳ ಮೊರೆ ಹೋಗುತ್ತಿವೆ. ಫೋರ್ಡ್ ಮೋಟಾರ್ ಕಂಪನಿ ಕೂಡ ಬಹುತೇಕ ಕೆಲಸಗಳನ್ನು ಆಟೋಮೇಷನ್ ಮಾಡಿಕೊಂಡಿದ್ದು, ಇದೀಗ ಎಜಿಲಿಟಿ ರೊಬಾಟಿಕ್ಸ್ನಿಂದ ಎರಡು ಡಿಜಿಟ್ ರೊಬಾಟ್ಗಳನ್ನು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಒಪ್ಪಂದವನ್ನೂ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವುದಕ್ಕೆ ಈ ರೊಬಾಟ್ಗಳು ನೆರವಾಗಲಿವೆ. ರೊಬಾಟ್ಗಳಿಗೆ ಪರಸ್ಪರ ಮಾತನಾಡುವ ಸಾಮರ್ಥ್ಯವೂ ಇದ್ದು ಅನುಕೂಲವಾಗಲಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಡಿಜಿಟ್ನ ಮೊದಲ ಪ್ರೊಟೊಟೈಪ್ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ಲಾಸ್ವೇಗಾಸ್ನಲ್ಲಿ ಸಿಇಎಸ್ 2020ರ ಜನವರಿ 7-10ರಂದು ನಡೆದಾಗ ಅಲ್ಲಿ ಫೋರ್ಡ್ನ ಬೂತ್ನಲ್ಲಿ ಎರಡು ಪ್ರೀ ಪ್ರೊಡಕ್ಷನ್ ಡಿಜಿಟ್ ಪ್ರೊಟೊಟೈಪ್ ರೊಬಾಟ್ಗಳನ್ನು ಬಳಸಲಾಗಿತ್ತು. ಇದು ಟೆಕ್ ಜಗತ್ತಿನ ಗಮನಸೆಳೆದಿತ್ತು. ಫೋರ್ಡ್ ಮತ್ತು ಎಜಿಲಿಟಿ ರೊಬಾಟಿಕ್ಸ್ನ ಈ ಪ್ರಯತ್ನ ಈಗ ಜಗತ್ತಿನ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)