ವಿನಯ್ ಗೂರೂಜಿ ಆಶೀರ್ವಾದ ಪಡೆದ ಪರಮೇಶ್ವರ್

Param1
Published on

ತುಮಕೂರು: ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ವಾದ, ಕರ್ಮ ಸಿದ್ಧಾಂತವನ್ನು ಪ್ರತಿ ಕಣಕಣದಲ್ಲೂ ಆಚರಣೆಯಲ್ಲಿಟ್ಟುಕೊಂಡವರಲ್ಲಿ ಡಾ.ಜಿ.ಪರಮೇಶ್ವರ್ ಮೊದಲಿಗರು ಎಂದು ಗೌರಿಗದ್ದೆಯ ವಿನಯ್ ಗೂರೂಜಿ ಹೇಳಿದರು.

ನಗರದ ಹೊರವಲಯದ ಅಗಲಕೋಟೆ ಬಳಿಯ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿದ ವಿನಯ್ ಗುರೂಜಿ, ಪರಮೇಶ್ವರ್, ಕನ್ಯಕಾ ಪರಮೇಶ್ವರ್ ಅವರನ್ನು ಆಶೀರ್ವದಿಸಿ ಮಾತನಾಡಿದ ಅವರು, ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಎಷ್ಟೋ ಬಡ ಮಕ್ಕಳಿಗೆ ವಿದ್ಯೆ ಕಲಿಸಿ, ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎಂದರು.

ದೂರದ ಎಲ್ಲಿಗೋ ಹೋಗಿ ಬಿಇ, ಮೆಡಿಕಲ್ ಓದಬೇಕಾಗಿತ್ತು. ಬಡ ಮಕ್ಕಳಿಗೆ ವಿದ್ಯೆಯನ್ನು ಅವರ ಬಳಿಗೆ ತೆಗೆದುಕೊಂಡ ಹೋಗುವ ಪ್ರಯತ್ನವನ್ನು ಪರಮೇಶ್ವರ್ ಕುಟುಂಬ ಮಾಡುತ್ತಿದೆ. ಜತೆಗೆ ಅದೆಷ್ಟೋ ಬಡ ಮಕ್ಕಳಿಗೆ ಉದ್ಯೋಗ ದೊರಕಿಸುವಂತಹ ಕಾಯಕವನ್ನು ಮಾಡುತ್ತಿದ್ದಾರೆ. ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ಗಾಂಧೀಜಿಯವರ ಸಿದ್ಧಾಂತದ ಮೇಲೆ ನಡೆಯುತ್ತಿರುವ ವಿನಯ್ ಗುರೂಜಿ ಅವರು ನಮಗೆಲ್ಲ ಪ್ರೇರಣೆಯಾಗಿದ್ದು, ಅವರಿಂದ ಧಾರ್ಮಿಕ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆಯ ಕ್ರಾಂತಿಯಾಗಲಿದೆ ಎಂದು ಪರಮೇಶ್ವರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net