ಸರ್ಕಾರದ ವಿಳಂಬ ಖಂಡಿಸಿ ಪಂಚಮಸಾಲಿಗರ ಚಳುವಳಿ

Panchamasali Protest
Published on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಕರ್ನಾಟಕಕ್ಕೆ ಭೇಟಿ ನೀಡಿ ರಾಜ್ಯ ವಿಧಾನಸಭೆ ಚುನಾವಣೆಯ ರಣ ಕಹಳೆ ಮೊಳಗಿಸುತ್ತಿರುವುದು ಒಂದೆಡೆಯಾದರೆ, ಇತ್ತ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪಂಚಮಸಾಲಿ ಸಮುದಾಯದವರು ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ 46 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಸೋಮವಾರ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ನೂರಾರು ಜನರಿಂದ ಅರೆಬೆತ್ತಲೆ ಚಳುವಳಿ ನಡೆಯಿತು. ಈ ವೇಳೆ ಸರ್ಕಾರದ ವಿಳಂಬ ನೀತಿ ಖಂಡಿಸಿ ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ದಿನ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಮುಂದೆ ಬಾಯಿ ಬಡಿದುಕೊಂಡ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿ ನಿತ್ಯ ಮುಷ್ಕರದಲ್ಲಿ ವಿನೂತನ ಪ್ರತಿಭಟನೆ ನಡೆಯುತ್ತಿದ್ದು, ಮಂಗಳವಾರ(ಫೆ.28) ಬಾರುಕೊಲು ಚಳುವಳಿ ನಡೆಯಲಿದೆ.

ಮೀಸಲಾತಿ ನೀಡುವ ವಿಚಾರದಲ್ಲಿ ಸಿಎಂ ಅವರು, ಆರು ಬಾರಿ ತಮ್ಮ ತಾಯಿ ಮೇಲೆ ಆಣೆ ಮಾಡಿ ಮಾತು ತಪ್ಪಿದ್ದರು. ಇದನ್ನು ಖಂಡಿಸಿ ಸಮುದಾಯದ ರಾಷ್ಟ್ರೀಯ, ರಾಜ್ಯ ಜಿಲ್ಲಾ, ತಾಲೂಕು ಘಟಕಗಳು, ಪದಾಧಿಕಾರಿಗಳು, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ, ಗೌಡ, ಮಲೆಗೌಡ,ದೀಕ್ಷಾ ಲಿಂಗಾಯತ ಪಂಚಮಸಾಲಿ ಮೀಸಲಾತಿ ಚಳುವಳಿ ಸಮಿತಿ ಹಾಗೂ ಬೆಂಗಳೂರು, ಬೆಂ. ಗ್ರಾಮಾಂತರ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಹೆಚ್ಚಿನ ಜನರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಮೀಸಲಾತಿಗಾಗಿ ನಡೆಯುತ್ತಿರುವ ಐತಿಹಾಸಿಕ ಹೋರಾಟಕ್ಕೆ ಎರಡು ವರ್ಷ ಕಳೆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. 2021ರ ಜ.14ರಿಂದ ಇದುವರೆಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ, ಉಪವಾಸ ಸತ್ಯಗ್ರಹ, ಧರಣಿ, ಸಮಾವೇಶ, ಗಡುವು ಮತ್ತು ಬಂದ್ ಸೇರಿ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸಿಕೊಂಡು ಬರಲಾಗಿದೆ. ಆದರೂ, ಸರ್ಕಾರ ನಮಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಮಾ.15ರೊಳಗೆ ಮೀಸಲಾತಿ ಕಲ್ಪಿಸದಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹೋರಾಟವನ್ನು ಜನತಾ ನ್ಯಾಯಾಲಯ ಮುಂದೆ ಕೊಂಡೊಯ್ಯುವುದಾಗಿ ಈಗಾಗಲೇ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಎರಡು ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆ ವಿಚಾರವೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದಿದೆ. ಮೋದಿಯವರ ವಿಜಯಯಾತ್ರೆ ಯಶಸ್ಸಿ ಆಗಬೇಕೆಂದರೆ ನಮಗೆ ಮೀಸಲಾತಿ ೋಷಿಸಬೇಕು. ಕೇಂದ್ರ ಸರ್ಕಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿಯ ಸತ್ಯಾಸತ್ಯತೆ ಬಗ್ಗೆ ಗಮನಕ್ಕೆ ತಂದಿಲ್ಲ. ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ. ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net