

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ನೆಲದಲ್ಲಿ ಸಾವಿರಾರು ಕೋಟಿ ರೂಪಾಯಿ ಯೋಜನೆ ಹಾಗೂ ಉದ್ಘಾಟನೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಅನೇಕ ದಿನಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಬೇಡಿಕೆಯಿತ್ತು. ಅದೀಗ ಪೂರ್ಣಗೊಂಡಿದೆ. ಮಲೆನಾಡಿನಲ್ಲಿ ನಿರ್ಮಾಣವಾದ ಈ ವಿಮಾನ ನಿಲ್ದಾಣ ಸುಂದರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡುತ್ತಾ, ಇದು ಕೇವಲ ಒಂದು ವಿಮಾನ ನಿಲ್ದಾಣವಲ್ಲ, ಇದೊಂದು ಉಡಾನ್ ಅಭಿಯಾನ್. ರೈಲ್ವೇ, ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದರಿಂದ ಶಿವಮೊಗ್ಗದ ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಅನುಕೂಲವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದಾಗಿ ಕರ್ನಾಟಕ ಅಭಿವೃದ್ಧಿ ಪಥದ ವೇಗ ಹೆಚ್ಚಾಗಿದೆ ಎಂದು ಹೇಳಿದರು.
ಶಿವಮೊಗ್ಗವನ್ನು ಅಗ್ರಿಕಲ್ಚರ್ ಹಬ್ ನಿರ್ಮಾಣ ಮಾಡುವ ಆಶಯ ಹೊಂದಿದ್ದು, ಇದಕ್ಕಾಗಿ ಸುಲಭ ಸಂಪರ್ಕ ಸಾಧ್ಯತೆ ಬೇಕಿತ್ತು. ಹೀಗಾಗಿ ಡಬಲ್ ಇಂಜಿನ್ ಸರ್ಕಾರ ವಿಮಾನ ನಿಲ್ದಾಣ ಆರಂಭಿಸಿದೆ. ಹೀಗಾಗಿ ಇನ್ಮುಂದೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದರು.
ಫೆ.28 ವಿಶೇಷವಾಗಿದ್ದು ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನ. ಅವರ ಆರೋಗ್ಯ, ಆಯಸ್ಸು ಹೆಚ್ಚಲಿ ಎಂದು ಆಶಿಸುತ್ತೇನೆ. ಯಡಿಯೂರಪ್ಪ ಅವರು ಬಡವರ ಹಾಗೂ ರೈತರ ಕಲ್ಯಾಣಕ್ಕೆ ಶ್ರಮಿಸಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಮಾದರಿಯಾಗಿದ್ದಾರೆ. ಅವರ ಭಾಷಣ ಹಾಗೂ ಜೀವನ ಪ್ರೇರಣೆಯಾಗಿದೆ ಎಂದರು. ಇದೇ ವೇಳೆ ಕಾರ್ಯಕರ್ತರಲ್ಲಿ ಮೊಬೈಲ್ ಪ್ಲಾಷ್ ಲೈಟ್ ಆನ್ ಮಾಡಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವಂತೆ ಮನವಿ ಮಾಡಿದರು.
ದೇಶದ ಹೆಮ್ಮೆಯ ಸಂಸ್ಥೆಯಾದ ಏರ್ ಇಂಡಿಯಾ ಏರ್ಲೈನ್ಸ್ ಉಡಾನ್ ಯೋಜನೆ ಮೂಲಕ ಹೊಸ ರೂಪದಲ್ಲಿ ಬೆಳೆಯುತ್ತಿದೆ. ಇದೇ ಸಮಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಗೊಂಡಿದೆ. ಇಂದು ಭಾರತಕ್ಕೆ ಸಾವಿರ ವಿಮಾನಗಳ ಅಗತ್ಯತೆ ಇದೆ. ದೇಶದಲ್ಲಿ ವಾಯುಯಾನ ವಿಸ್ತರಣೆ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗವೂ ಸಿಗಲಿದೆ ಎಂದರು.
ಹಿಂದೆ ಪ್ರಮುಖ ನಗರಗಳಲ್ಲಿ ಮಾತ್ರ ವಿಮಾನ ನಿಲ್ದಾಣಗಳಿದ್ದವು. ಕಾಂಗ್ರೆಸ್ ಸಣ್ಣ ನಗರಗಳನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಇದರಿಂದಾಗಿ ದೇಶದಲ್ಲಿ ಕೇವಲ 70 ವಿಮಾನ ನಿಲ್ದಾಣಗಳಿದ್ದವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 74 ವಿಮಾನ ನಿಲ್ದಾಣ ನಿರ್ಮಿಸಿದ್ದೇವೆ. ಪ್ರತಿಯೊಬ್ಬರು ವಾಯುಯಾನ ಮಾಡಬೇಕು ಎಂಬ ಉದ್ದೇಶದಿಂದ ಉಡಾನ್ ಯೋಜನೆ ರೂಪಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.