

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ನಿಮ್ಮ ಜನ್ಮದಿನದಂದೇ ವಿಮಾನ ನಿಲ್ದಾಣ ಉದ್ಘಾಟನೆ ಆಗಬೇಕೆಂದು ಹೇಳಿದ್ದರು. ಇದೀಗ ಲೋಕಾರ್ಪಣೆಗೆ ಪ್ರಧಾನಿ ಬಂದಿರುವುದು ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿ.ಎಂ ಯಡಿಯೂರಪ್ಪ ಮಾತನಾಡುತ್ತಾ, ನರೇಂದ್ರ ಮೋದಿ ಅವರು ವಿಶೇಷ ವಿಮಾನದಲ್ಲಿ ನಿಲ್ದಾಣಕ್ಕೆ ಬಂದಿಳಿದು ಉದ್ಘಾಟಿಸಿದ್ದಾರೆ. ಇದು ಖುಷಿ ತಂದಿದ್ದು, ಇಂದು ನನ್ನ ಅವಿಸ್ಮರಣೀಯ ದಿನ. ನನ್ನ 60ನೇ ವರ್ಷದ ಜನ್ಮ ದಿನ ಕಾರ್ಯಕ್ರಮಕ್ಕೆ ವಾಜಪೇಯಿ ಬಂದಿದ್ದರು. 80ನೇ ವರ್ಷದ ಜನ್ಮದಿನಕ್ಕೆ ಪ್ರಧಾನಿ ಮೋದಿ ಆಗಮಿಸಿರುವುದು ಖುಷಿ ತಂದಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಜನತೆ ನನಗೆ ಧೈರ್ಯ ತುಂಬಿ ಶಾಸಕನನ್ನಾಗಿ ಮಾಡಿ ನಾಡಿನ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಶಾಸಕನಾಗಿ, ಸಂಸದನಾಗಿ, ಮುಖ್ಯಮಂತ್ರಿ ಆಗಲು ಅವಕಾಶ ನೀಡಿದ ಜನರ ಪ್ರೀತಿಗೆ ಋಣಿಯಾಗಿದ್ದೇನೆ. 2014ರಲ್ಲಿ ನಾನು ಸಂಸತ್ ಚುನಾವಣೆಗೆ ನಿಂತಾಗ 3.65 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆ. 55 ವರ್ಷದ ರಾಜಕೀಯ ಜೀವನದಲ್ಲಿ ನಾನು ಅಧಿಕಾರದಲ್ಲಿದ್ದುದ್ದು ಏಳು ವರ್ಷ ಮಾತ್ರ. ಅಧಿಕಾರದಲ್ಲಿರುವಾಗ ರಾಜ್ಯಾದ್ಯಂತ ಓಡಾಡಿ ಸರ್ವರಿಗೂ ಸಮಬಾಳು-ಸಮಪಾಲು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಕರ್ನಾಟಕ ಜನತೆಯ ಬಗ್ಗೆ ಪ್ರಧಾನಿ ಮೋದಿ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಪ್ರಧಾನಿ ವಿಶ್ವದ ಯಾವುದೇ ಮೂಲೆಗೆ ಹೋದರೂ ಬಸವಣ್ಣ ತತ್ವ ಉಲ್ಲೇಖಿಸಿ ಬರುತ್ತಾರೆ. ಪಟ್ಟಣದಲ್ಲಿ ದೊರೆಯುವ ಸವಲತ್ತು ಹಳ್ಳಿಗಳಲ್ಲೂ ಸಿಗಬೇಕು ಎಂಬುದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಪೇಕ್ಷೆಯಾಗಿತ್ತು. ಅದರಂತೆ ನಮ್ಮ ಡಬಲ್ ಇಂಜಿನ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ತಾಯಿ – ಮಗನನ್ನು ಬಲಿ ತೆಗೆದುಕೊಂಡ ವಾಟರ್ ಹೀಟರ್!