ಪಾಲ್ಗರ್​ ಸಾಧುಗಳ ಗುಂಪು ಹತ್ಯೆ: 25 ಮಂದಿಗೆ ಜಾಮೀನು ನಿರಾಕರಿಸಿದ ಕೋರ್ಟ್​

Palgar
Published on

ಮುಂಬೈ: ಏಪ್ರಿಲ್​ನಲ್ಲಿ ಮಹಾರಾಷ್ಟ್ರದ ಪಾಲ್ಗರ್​​ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದವರಲ್ಲಿ 25 ಮಂದಿಗೆ ಜಾಮೀನು ನೀಡಲು ದಹನು ಸೆಷನ್ಸ್​ ಕೋರ್ಟ್​ ನ್ಯಾಯಾಧೀಶ ಡಿ.ಎಚ್​. ಕೇಲುಸ್ಕರ್​ ಅವರು ನಿರಾಕರಿಸಿದ್ದಾರೆ.

ಏಪ್ರಿಲ್​ 16ರಂದು ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸಾಧುಗಳು ಹಾಗೂ ಅವರ ಚಾಲಕನನ್ನು ಪಾಲ್ಗರ್​​ನಲ್ಲಿ ಸ್ಥಳೀಯರು ಹೊಡೆದು ಹತ್ಯೆ ಮಾಡಿದ್ದರು. ಸಾಧುಗಳನ್ನು ನೋಡಿ ಮಕ್ಕಳ ಕಳ್ಳರೆಂದು ಭಾವಿಸಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದರು. ಈ ಕ್ರೂರ ಘಟನೆಗೆ ರಾಷ್ಟ್ರಾದ್ಯಂತ ವಿರೋಧ ವ್ಯಕ್ತವಾಗಿತ್ತು. ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಈ 25 ಮಂದಿ ಸಹ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪಬ್ಲಿಕ್​ ಪ್ರಾಸಿಕ್ಯೂಟರ್​ ಮನೇಶ್​ ಶಿಂಧೆ ಅವರು ಆರೋಪಿಗಳಿಗೆ ಜಾಮೀನು ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಅವರ ಮೊಬೈಲ್​ ಕಾಲ್​ ಡಾಟಾ, ರೆಕಾರ್ಸ್​ ಸೇರಿ ಹಲವು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಅವೆಲ್ಲವೂ 25ಜನರ ವಿರುದ್ಧವೇ ಇತ್ತು. ಹಾಗಾಗಿ ಬೇಲ್​ ನಿರಾಕರಣೆಯಾಗಿದೆ ಎಂದು ಮನೇಶ್​ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳು ಸೇರಿದಂತೆ ಮೂವರ ಬರ್ಬರ ಹತ್ಯೆ! ಪೊಲೀಸರ ಎದುರೇ ನಡೆಯಿತು ಘನಘೋರ ಕೃತ್ಯ

ಅಂದಿನ ಘಟನೆಯ ಸಮಗ್ರ ತನಿಖೆ ನಡೆಸಿದಾಗ ಇವರೆಲ್ಲರೂ ಸ್ಥಳದಲ್ಲಿ ಇದ್ದರು ಎಂಬುದು ಸಾಬೀತಾಗಿದೆ. ರಾಜ್ಯ ಪೊಲಿಸ್ ಅಪರಾಧ ವಿಭಾಗ ಪ್ರಕರಣದ ತನಿಖೆ ನಡೆಸಿತ್ತು.

ಏಪ್ರಿಲ್​ 16ರಂದು ರಾತ್ರಿ ಕಲ್ಪವೃಕ್ಷಗಿರಿ ಮಹಾರಾಜ್​ (70), ಸುಶೀಲ್​ಗಿರಿ ಮಹಾರಾಜ್​ (30) ಎಂಬ ಸಾಧುಗಳು ಕಾರಿನಲ್ಲಿ ಮುಂಬೈನಿಂದ ಸೂರತ್​ಗೆ ತೆರಳುತ್ತಿದ್ದರು. ನಿಲೇಶ್​ ತೆಲ್ಗಡೆ ಕಾರಿನ ಚಾಲಕರಾಗಿದ್ದರು. ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದ ಅವರನ್ನು ಮಹಾರಾಷ್ಟ್ರದ ಪಾಲ್ಗರ್​ ಬಳಿ ಅಲ್ಲಿನ ಸುಮಾರು 500 ಮಂದಿ ಸೇರಿ ಹೊಡೆದು, ಕೊಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net