More

    ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳು ಸೇರಿದಂತೆ ಮೂವರ ಬರ್ಬರ ಹತ್ಯೆ! ಪೊಲೀಸರ ಎದುರೇ ನಡೆಯಿತು ಘನಘೋರ ಕೃತ್ಯ

    ಪಾಲ್ಗರ್‌ (ಮುಂಬೈ): ಕರೊನಾ ವೈರಸ್‌ ಮಹಾಮಾರಿಯಿಂದ ದೇಶ ಇನ್ನೂ ಸುಧಾರಿಸಿಕೊಳ್ಳುತ್ತಿಲ್ಲ. ಈ ನಡುವೆಯೇ ಮಕ್ಕಳ ಕಳ್ಳರೆಂದು ಭಾವಿಸಿ ಅಮಾಯಕರನ್ನು ಸಾಯಿಸಿರುವ ಆತಂಕಕಾರಿ ಘಟನೆ ಮತ್ತೆ ವರದಿಯಾಗಿದೆ!

    ಮಕ್ಕಳ ಕಳ್ಳರೆಂದು ಭಾವಿಸಿ ಮೂವರು ವ್ಯಕ್ತಿಗಳನ್ನು ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ಜನರು ಪೊಲೀಸರ ಎದುರೇ ದೊಣ್ಣೆಗಳಿಂದ ಹೊಡೆದು ಸಾಯಿಸಿದ್ದಾರೆ. ಇವರಲ್ಲಿ ಇಬ್ಬರು ಸಾಧುಗಳು ಹಾಗೂ ಒಬ್ಬ ಕಾರು ಚಾಲಕ. ಈ ಮೂವರೂ ಖಂಡಿವಾಲಿಯಿಂದ ಪಾಲ್ಗರ್‌ ಮಾರ್ಗವಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

    ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಉದ್ರಿಕ್ತರಾಗಿದ್ದ ಗ್ರಾಮಸ್ಥರು ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಸಾಧುಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗ ಎಳೆದಾಡಿ ದೊಣ್ಣೆ, ಕಲ್ಲುಗಳಿಂದ ಹೊಡೆಯುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಅಲ್ಲಿಗೆ ಬಂದಿರುವ ಜನರು ತಮ್ಮನ್ನು ರಕ್ಷಿಸುವಂತೆ ಪೊಲೀಸರಲ್ಲಿ ಬೇಡುತ್ತಿರುವ ಸನ್ನಿವೇಶಗಳು ಈ ವೀಡಿಯೋದಲ್ಲಿವೆ. ಇನ್ನೊಂದು ವೀಡಿಯೋದಲ್ಲಿ ಉದ್ರಿಕ್ತರು ಜನರು ಪ್ರಯಾಣಿಸುತ್ತಿದ್ದ ಕಾರು ಮತ್ತು ಪೊಲೀಸರ ಗಸ್ತು ವಾಹನವನ್ನು ಧ್ವಂಸಗೊಳಿಸುವ ದೃಶ್ಯಗಳು ಇವೆ.

    ಘಟನೆಗೆ ಸಂಬಂಧಿಸಿದಂತೆ 9 ಮಕ್ಕಳು ಸೇರಿದಂತೆ 101 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಏಪ್ರಿಲ್‌ 30ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದ್ದು, ಮಕ್ಕಳನ್ನು ಬಾಲಮಂದಿರದ ವಶಕ್ಕೆ ಒಪ್ಪಿಸಲಾಗಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಾಲ್ಗರ್‌ ಜಿಲ್ಲಾಧಿಕಾರಿ ಕೈಲಾಸ್‌ ಶಿಂಧೆ, ‘ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹಲ್ಲೆಗೊಳಗಾಗಿದ್ದ ಸಾಧುಗಳು ಸೇರಿದಂತೆ ಮೂವರನ್ನು ಪೊಲೀಸ್‌ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ಆಗ ಗುಂಪು ಮತ್ತೆ ದಾಳಿ ಆರಂಭಿಸಿದೆ. ಪೊಲೀಸರಿಗೂ ಗಾಯಗಳಾಗಿವೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟರು. ಪ್ರಕರಣದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈಗಲಾಗಲೇ 101 ಜನರನ್ನು ನಾವು ಬಂಧಿಸಿದ್ದೇವೆ. ದಯವಿಟ್ಟು ಗ್ರಾಮಸ್ಥರು ಗಾಳಿ ಸುದ್ದಿಗಳನ್ನು ನಂಬಬಾರದು. ಮಕ್ಕಳನ್ನು ಅಪಹರಿಸಲು ಯಾರೂ ಊರುಗಳಿಗೆ ಬರುವುದಿಲ್ಲ. ಗ್ರಾಮಸ್ಥರು ಹೀಗೆ ಕಾನೂನು ಕೈಗೆತ್ತಿಕೊಂಡರೆ ನಾವು ಕ್ರಮ ಕೈಗೊಳ್ಳುತ್ತೇವೆ,’ ಎಂದು ಹೇಳಿದ್ದಾರೆ.

    . ಘಟನೆ ಕುರಿತು ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ. ‘ಇದು ಅತ್ಯಂತ ಘೋರ ಮತ್ತು ನಾಚಿಕೆಗೇಡಿನ ಕೃತ್ಯ. ಇದರಲ್ಲಿ ಭಾಗಿಯಾದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ಕಠಿಣ ಶಿಕ್ಷೆ ಕೊಡಿಸಲಾಗುವುದು,’ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್‌ ಮೂಲಕ ತಿಳಿಸಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಟ್ವೀಟ್‌ ಮಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್‌) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts