ದಾವೂದ್​ ಜತೆಗೂಡಿ 26/11 ರೀತಿಯ ದಾಳಿಗೆ ಉಗ್ರರ ಯೋಜನೆ

dawood
Published on

ನವದೆಹಲಿ: ಭಾರತ ಕೋವಿಡ್​ 19 ವಿರುದ್ಧ ಹೋರಾಡುತ್ತಿದ್ದರೆ ಪಾಪಿ ಪಾಕಿಸ್ತಾನ ಭಾರತದ ಮೇಲೆ ಉಗ್ರರನ್ನು ಛೂ ಬಿಡಲು ಯೋಜನೆಗಳನ್ನು ರೂಪಿಸುತ್ತಿದೆ. ಪಾಕ್​ನಲ್ಲಿ ಅಡಗಿ ಕುಳಿತಿರುವ ಮುಂಬೈ ಸರಣಿ ಬಾಂಬ್​ ಸ್ಫೋಟದ ಪ್ರಮುಖ ಆರೋಪಿ ದಾವೂದ್​ ಇಬ್ರಾಹಿಂ ಈ ಕಾರ್ಯದಲ್ಲಿ ಅದರೊಂದಿಗೆ ಕೈ ಜೋಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಆದರೆ ಈ ದಾಳಿಯಲ್ಲಿ ಪಾಕ್​ ಮೂಲದ ಭಯೋತ್ಪಾದನೆ ಸಂಘಟನೆಗಳು ಉಗ್ರರು ಯಾರೂ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಭಾರತದಲ್ಲಿರುವ ಭೂಗತಪಾತಕಿ ದಾವೂದ್​ ಇಬ್ರಾಹಿಂನ ತಂಡದ ಸದಸ್ಯರನ್ನು ಆ ಸಂಘಟನೆಗಳು ಬಳಸಿಕೊಳ್ಳಲಿರುವುದು ವಿಶೇಷವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಲ್ಲಿ 370ನೇ ವಿಧಿಯನ್ನು ಜಾರಿಗೊಳಿಸಿದ ನಂತರದಲ್ಲಿ ಯಾವುದೇ ಪ್ರಮುಖ ದಾಳಿ ಸಂಘಟಿಸಲು ಪಾಕ್​ನ ಬೇಹುಗಾರಿಕಾ ಪಡೆ ಐಎಸ್​ಐಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಅದು, ಶತಾಯಗತಾಯ ಭಾರತದಲ್ಲಿ ಭಾರಿ ದಾಳಿಯನ್ನು ಸಂಘಟಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್​ ಎ ತೊಯ್ಬಾ ಭಯೋತ್ಪಾದನಾ ಸಂಘಟನೆ ಉಗ್ರರು ದಾವೂದ್​ ಜತೆಗೂಡಿ 26/11ರ ಮುಂಬೈ ಮೇಲಿನ ಉಗ್ರರ ದಾಳಿಯ ರೀತಿಯ ಮತ್ತೊಂದು ದಾಳಿ ಸಂಘಟಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.

ಇಸ್ಲಾಮಾಬಾದ್​ನಲ್ಲಿರುವ ಪಾಕ್​ನ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರ್ರಫ್​ ಮನೆಯ ಪಕ್ಕದಲ್ಲಿರುವ ದಾವೂದ್​ನ ಫಾರ್ಮ್​ಹೌಸ್​ನಲ್ಲಿ ಭೂಗತಪಾತಕಿ ಹಾಗೂ ಲಷ್ಕರ್​ನ ಪ್ರಮುಖ ಉಗ್ರರು ಸಭೆ ನಡೆಸಿದರು ಎನ್ನಲಾಗಿದೆ. ಪಾಕಿಸ್ತಾನದ ಬೇಹುಗಾರಿಕಾ ಪಡೆ ಐಎಸ್​ಐನ ಕೆಲ ಅಧಿಕಾರಿಗಳು ಹಾಗೂ ಅಂಗರಕ್ಷಕ ಪಡೆಯೊಂದಿಗೆ ದಾವೂದ್​ ಸಭೆಗೆ ಬಂದಿದ್ದ ಎಂದು ಗುಪ್ತಚರ ಮಾಹಿತಿಗಳು ತಿಳಿಸಿವೆ.

ಸಭೆಯಲ್ಲಿ ಆದ ಚರ್ಚೆಗಳ ಬಗ್ಗೆ ಕೆಲವೊಂದು ಸೂಕ್ಷ್ಮ ಮಾಹಿತಿಗಳು ಲಭಿಸಿದ್ದು, ಭಾರತೀಯ ಭದ್ರತಾ ಪಡೆ ಸಿಬ್ಬಂದಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮಗ್ನರಾಗಿರುವಾಗಲೇ ದಾಳಿಗಳನ್ನು ಸಂಘಟಿಸಿ, ಧಾರ್ಮಿಕ ಸೌಹಾರ್ದತೆ ಕದಡಬೇಕು ಎಂಬುದು ಐಎಸ್​ಐನ ಪ್ರಮುಖ ಧ್ಯೇಯವಾಗಿದೆ. ಇದಕ್ಕೆ ಪೂರಕವಾಗಿ ಲಷ್ಕರ್​ ಉಗ್ರರು ಗುಜರಾತ್​ ಆಥವಾ ಮಹಾರಾಷ್ಟ್ರಕ್ಕೆ ಸಮುದ್ರ ಮಾರ್ಗದಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸಲಿದ್ದಾರೆ.

ಈ ಕುಟಿಲ ತಂತ್ರಗಾರಿಕೆಯನ್ನು ನಿರ್ಧರಿಸುವ ಸಲುವಾಗಿ ಲಷ್ಕರ್​ನ ಎರಡನೇ ಹಂತದ ಪ್ರಮುಖ ಉಗ್ರ ಅಬ್ದುಲ್​ ರೆಹಮಾನ್​ ಮಕ್ಕಿ ಇತ್ತೀಚೆಗೆ ಕರಾಚಿಗೆ ತೆರಳಿದ್ದಲ್ಲದೆ, ದಾವೂದ್​ನನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದ ಎಂದು ಹೇಳಲಾಗಿದೆ.

ತಾವು ತಲುಪಿಸುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ದಾಳಿಗಳನ್ನು ಸಂಘಟಿಸುವಂತೆ ತಮ್ಮ ಭೂಗತ ತಂಡದ ಸದಸ್ಯರಿಗೆ ಸೂಚಿಸುವಂತೆ ಉಗ್ರ ಸಂಘಟನೆಗಳು ದಾವೂದ್​ಗೆ ಸೂಚಿಸಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net