ಗಂಡನಿಂದ ವಿಚ್ಛೇದನ ಪಡೆದಿದ್ದಕ್ಕೆ ಸ್ನೇಹಿತರಿಗೆ ಪಾರ್ಟಿ ಕೊಟ್ಟು ಕುಣಿದು ಕುಪ್ಪಳಿಸಿದ ಮಹಿಳೆ! ವಿಡಿಯೋ ವೈರಲ್​

Divorce Party
Published on

ವಾಷಿಂಗ್ಟನ್​: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ, ಇಂದು ಮದುವೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ನವವಿವಾಹಿತರು ನೂರು ವರ್ಷಗಳ ಕಾಲ ಸುಖವಾಗಿರಲೆಂದು ಆಶೀರ್ವದಿಸಿ ಮದುವೆ ಮಾಡಿಕೊಡಲಾಗುತ್ತದೆ. ಆದರೆ, ಇಂದು ಮದುವೆಯಾದ ಕೆಲವೇ ದಿನಗಳಲ್ಲಿ ಭಿನ್ನಾಭಿಪ್ರಾಯದಿಂದ ದಂಪತಿ ವಿಚ್ಛೇದನ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ಮದುವೆಯಾದ ಮೂರೇ ನಿಮಿಷದಲ್ಲಿ ಡಿವೋರ್ಸ್​ ಹೇಳಿದ್ದು ಭಾರಿ ಸುದ್ದಿಯಾಯಿತು. ಇಲ್ಲಿಯವರೆಗೆ ಇಂದಿನ ಮದುವೆ ಸ್ಥಿತಿ ಬಂದು ನಿಂತಿದೆ.

ವಿಚ್ಛೇದನ ಅನ್ನೋದೇ ಒಂದು ಬೇಸರದ ಸುದ್ದಿ. ಆದರೆ, ಇತ್ತೀಚೆಗೆ ವಿಚ್ಛೇದನದಲ್ಲೂ ಹೊಸ ಟ್ರೆಂಡ್​ ಒಂದು ಶುರುವಾಗಿದೆ. ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಲಾಗುತ್ತದೆ. ಆದರೆ, ಇದೀಗ ವಿಚ್ಛೇದನವನ್ನು ಸಂಭ್ರಮಿಸಲು ಸಹ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಿದ ಬಳಿಕ ಸ್ನೇಹಿತರೊಂದಿಗೆ ಸೇರಿ ಡಿವೋರ್ಸ್​ ಪಾರ್ಟಿ ಮಾಡಿದ್ದಾಳೆ. ಪಾರ್ಟಿಯಲ್ಲಿ ನೃತ್ಯ ಮಾಡಿ, ಸಂಭ್ರಮಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಇತ್ತೀಚೆಗೆ ಮುರಿದು ಬೀಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳು ನ್ಯಾಯಾಲಯದ ಮೊರೆ ಹೋಗಿ ವಿಚ್ಛೇದನ ಪಡೆಯುತ್ತವೆ. ಇದೀಗ ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನದ ಮಹಿಳೆ, ವಿವಾಹವಾದ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡಿದ್ದು, ಅದೇ ಖುಷಿಯಲ್ಲಿ ತನ್ನ ಸ್ನೇಹಿತರಿಗಾಗಿ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ.

ಮಹಿಳೆ ಮಾಡಿದ ನೃತ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ನೀಲಿ ಬಣ್ಣದ ಲೆಹೆಂಗಾ ಧರಿಸಿ ಪಾರ್ಟಿಯಲ್ಲಿ ಮುಂಚಿದಳು. ಡಿವೋರ್ಸ್ ಮುಬಾರಕ್ ಹೆಸರಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು, ಅದು ಆಕೆಯ ಜೀವನ, ಅವಳ ಖುಷಿ ಅವಳಿಷ್ಟ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಮದುವೆ ಯಾಕೆ ಆಗಬೇಕಿತ್ತು. ಡಿವೋರ್ಸ್​ ಅನ್ನು ಯಾರಾದರೂ ಸಂಭ್ರಮಿಸುತ್ತಾರಾ? ಹೀಗೂ ಉಂಟಾ? ಈ ಕಣ್ಣಲ್ಲಿ ಇನ್ನೇನು ನೋಡಬೇಕು ಎಂದೆಲ್ಲ ಕಾಮೆಂಟ್​ ಮೂಲಕ ಕಿಡಿಕಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net