ಚೆನ್ನೈ: ಬ್ಲಾಕ್ಬಸ್ಟರ್ ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್ಗೆ ಕಾಲಿವುಡ್ ಸೂಪರ್ಸ್ಟಾರ್ ಅಜಿತ್ ಕುಮಾರ್ ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿಯಾದಾಗಿನಿಂದ ಅಜಿತ್ ಅವರ ಹೆಸರು ಎಲ್ಲೆಡೆ ಟ್ರೆಂಡಿಂಗ್ನಲ್ಲಿದೆ. ನೀಲ್ ನಿರ್ದೇಶನದ ಎರಡು ಪ್ರಾಜೆಕ್ಟ್ಗೆ ಅಜಿತ್ ಓಕೆ ಎಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಜಿಎಫ್ ಚಾಪ್ಟರ್ 3ನಲ್ಲಿ ಅಜಿತ್ ನಾಯಕರಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಆದರೆ, ಇದೀಗ ಈ ವದಂತಿಗೆ ಅಜಿತ್ ಅವರ ಮ್ಯಾನೇಜರ್ ಪೂರ್ಣ ವಿರಾಮ ಹಾಕಿದ್ದಾರೆ.
ಪ್ರಶಾಂತ್ ನೀಲ್ ಮತ್ತು ಅಜಿತ್ ಭೇಟಿಯಾಗಿರುವುದನ್ನು ಮ್ಯಾನೇಜರ್ ಸುರೇಶ್ ಚಂದ್ರ ಅವರು ಖಚಿತಪಡಿಸಿದ್ದಾರೆ. ಆದರೆ, ಸಿನಿಮಾ ಸೆಟ್ಟೇರಲಿದೆ ಎಂಬುದನ್ನು ಅವರು ತಿರಸ್ಕರಿಸಿದ್ದಾರೆ. ಸದ್ಯಕ್ಕೆ ಅಜಿತ್ ಅವರು ನೀಲ್ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುವುದನ್ನು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುರೇಶ್ ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ವದಂತಿಗಳು ಹರಿದಾಡುತ್ತಿವೆ. ಆದರೆ, ಇದ್ಯಾವುದು ನಿಜವಲ್ಲ. ಆದರೆ, ಅಜಿತ್ ಸರ್ ಮತ್ತು ಪ್ರಶಾಂತ್ ನೀಲ್ ಭೇಟಿಯಾಗಿರುವುದು ಸತ್ಯ. ಈ ವೇಳೆ ಅವರು ಆತ್ಮೀಯವಾಗಿ ಮಾತನಾಡಿದರೇ ಹೊರತು, ಯಾವುದೇ ಸಿನಿಮಾ ಕುರಿತು ಚರ್ಚೆಯಾಗಿಲ್ಲ. ನಾನು ಕೂಡ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಅಜಿತ್ ಸರ್ ಅವರನ್ನು ನೋಡಲು ಇಷ್ಟಪಡುತ್ತೇನೆ. ಆದರೆ, ಮುಂದಿನ ದಿನಗಳಲ್ಲಿ ಏನಾಗುತ್ತಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸುರೇಶ್ ಹೇಳಿದರು.
ಇದು ಕೇವಲ ವದಂತಿಯಷ್ಟೇ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಅಜಿತ್ ಅಭಿಮಾನಿಗಳು ತುಂಬಾ ನಿರಾಸೆಗೊಂಡಿದ್ದಾರೆ. ಭಾರಿ ಆಕ್ಷನ್ ಚಿತ್ರಕ್ಕಾಗಿ ಅಜಿತ್ ಅವರು ನೀಲ್ ಅವರೊಂದಿಗೆ ಕೈಜೋಡಿಸುತ್ತಾರೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು. ಅದರಲ್ಲೂ ಕೆಜಿಎಫ್ ಚಾಪ್ಟರ್ 3ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಕೇವಲ ವದಂತಿ ಎಂಬುದು ಇದೀಗ ಖಚಿತವಾಗಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಿತ್ ಅವರು ತಮ್ಮ ಮುಂದಿನ ಸಿನಿಮಾ ವಿದಾಮುಯಾರ್ಚಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಮಗಿಜ್ ತಿರುಮೇನಿ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರವು 2024ರ ದೀಪಾವಳಿಯಂದು ಚಿತ್ರಮಂದಿರಗಳಿಗೆ ಬರಲಿದೆ. (ಏಜೆನ್ಸೀಸ್)
ಮದ್ವೆಯಾಗಿ ಇಬ್ವರು ಮಕ್ಕಳಿರುವ ನಟನ ಪ್ರೀತಿಯಲ್ಲಿ ಬಿದ್ದ ಸಾಯಿ ಪಲ್ಲವಿ? ಆ ಸ್ಟಾರ್ ನಟ ಯಾರು?
ನಾನು ಸಾಯುವವರೆಗೂ ಅದು ಕೊನೆಯಾಗಲ್ಲ! ನಟಿ ಭಾವನಾಗೆ ಕಾಡುತ್ತಿದೆಯಂತೆ ಆ ಒಂದು ನೋವು