

ಇಸ್ಲಾಮಾಬಾದ್: ಕುಲಭೂಷಣ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶ ಪಾಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಪಾಕಿಸ್ತಾನ ಈಗ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದೆ. ಪ್ರತಿಪಕ್ಷಗಳ ವಿರೋಧ ನಡುವೆಯೇ ಈ ಕುರಿತ ಮಸೂದೆಯೊಂದನ್ನು ಸಂಸತ್ನಲ್ಲಿ ಸೋಮವಾರ ಮಂಡಿಸಿದೆ. ಪಾಕಿಸ್ತಾನದ ಮಿಲಿಟರಿ ಕೋರ್ಟ್ ನೀಡಿದ (ಜಾಧವ್ಗೆ ಮರಣದಂಡನೆ) ತೀರ್ಪನ್ನು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಲು ಇದರಲ್ಲಿ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಒಬ್ಬನೇ ವ್ಯಕ್ತಿಯಿಂದ, ಒಂದೇ ಸಮಯದಲ್ಲಿ ನಾವಿಬ್ಬರೂ ಗರ್ಭಿಣಿಯರಾಗಬೇಕು…: ಅವಳಿ ಸೋದರಿಯರ ಮಹದಾಸೆ
ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವರನ್ನು ಬೇಹುಗಾರಿಕೆ ಆರೋಪದ ಮೇಲೆ ಇರಾನ್ ಗಡಿಯಲ್ಲಿ ಪಾಕ್ ಬಂಧಿಸಿತ್ತು. ವಿಧ್ವಂಸಕ ಕೃತ್ಯ ಮತ್ತು ಬೇಹುಗಾರಿಕೆ ಆಪಾದನೆ ಮೇಲೆ ಮಿಲಿಟರಿ ನ್ಯಾಯಾಲಯ ಜಾಧವ್ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅಂತಾರಾಷ್ಟ್ರೀಯ ಕೋರ್ಟ್ಗೆ ಮೊರೆ ಹೋಗಿದ್ದ ಭಾರತ ಇದಕ್ಕೆ ತಡೆ ತಂದಿತ್ತು. ಜಾಧವ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಹಾಗೂ ಅವರಿಗೆ ಅಗತ್ಯ ಕಾನೂನು ನೆರವನ್ನು ನೀಡಬೇಕು ಎಂದು ಅಂತಾರಾಷ್ಟ್ರೀಯ ಕೋರ್ಟ್ ಇತ್ತೀಚೆಗೆ ಹೇಳಿತ್ತು. ಈ ಆದೇಶ ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಹೇಳಿತ್ತು.
ಈ ಮಧ್ಯೆ, ಪಾಕ್ ಎರಡು ಸಾರಿ ಜಾಧವ್ಗೆ ಭಾರತದ ಕಾನ್ಸುಲರ್ಗಳನ್ನು ಭೇಟಿ ಮಾಡಲು ಅವಕಾಶ ನೀಡಿದೆ. ಆದರೆ, ಈ ಭೇಟಿ ಪಾರದರ್ಶಕವಾಗಿ ಇರಲಿಲ್ಲ. ಜಾಧವ್ಗೆ ಮುಕ್ತವಾಗಿ ಮಾತನಾಡುವ ಸನ್ನಿವೇಶ ಇರಲಿಲ್ಲ ಎಂದು ಭಾರತ ಟೀಕಿಸಿದೆ.