

ನವದೆಹಲಿ: ಪಾಕಿಸ್ತಾನದಲ್ಲೂ ಉಷ್ಣಾಘಾತ ಉಂಟಾಗಿದ್ದು, ಕಳೆದ 24 ಗಂಟೆಗಳಲ್ಲಿ ಸಿಂಧ್ನ ಮೊಹೆಂಜೊದಾರೋದಲ್ಲಿ 52.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಈ ಗರಿಷ್ಠ ತಾಪಮಾನ ಈ ಬೇಸಿಗೆಯಲ್ಲಿದ ಅತ್ಯಧಿಕ ಉಷ್ಣಾಂಶವಾಗಿದೆ. ಅಲ್ಲದೆ, ಪಟ್ಟಣದಲ್ಲಿನ ಇದುವರೆಗಿನ ದಾಖಲೆಯ ಉಷ್ಣಾಂಶಕ್ಕೆ ಇದು ಸನಿಹವಾಗಿದ್ದು, ಸದ್ಯದಲ್ಲೇ ದಾಖಲೆ ಮುರಿಯವ ಲಕ್ಷಣಗಳು ಗೋಚರಿಸಿವೆ. ಇದುವರೆಗಿನ ಗರಿಷ್ಠ ತಾಪಮಾನ ಮೊಹೆಂಜೊದಾರೋದಲ್ಲಿ 53.5 ಹಾಗೂ ಪಾಕಿಸ್ತಾನದಲ್ಲಿ 54 ಡಿ. ಸೆ. ಆಗಿದೆ.
ಹವಾಮಾನ ವೈಪರೀತ್ಯಕ್ಕೆ ಸಿಲುಕಿ ನಲುಗುತ್ತಿರುವ ದುರ್ಬಲ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಐದನೇ ದೇಶವಾಗಿದೆ. ವಾಡಿಕೆಗಿಂತ ಅಧಿಕ ಮಳೆ ಹಾಗೂ ಪ್ರವಾಹಕ್ಕೂ ಪಾಕಿಸ್ತಾನ ಸಾಯಾಗಿದೆ ಎಂದು ಹವಾಮಾನಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿಯ ಸಮನ್ವಯಕಾರರಾಗಿರುವ ರುಬಿನಾ ಖುರ್ಷಿದ್ ಆಲಂ ತಿಳಿಸಿದ್ದಾರೆ.
ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಬಳಿಯ ಟರ್ಬತ್ನಲ್ಲಿ 2017ರಲ್ಲಿ ದಾಖಲಾಗಿದ್ದ 54 ಡಿ.ಸೆ. ತಾಪಮಾನ ದೇಶದಲ್ಲಿನ ಇದುವರೆಗಿನ ದಾಖಲೆಯ ಉಷ್ಣಾಂಶವಾಗಿದೆ. ಇದು ಏಷ್ಯಾದಲ್ಲೇ ಎರಡನೇ ಹಾಗೂ ಜಗತ್ತಿನಲ್ಲೇ ನಾಲ್ಕನೇ ಗರಿಷ್ಠ ತಾಪಮಾನವಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.