ಈ ಪಾಕಿಸ್ತಾನದ ರಜಿನಿಕಾಂತ್​ಗೆ ಸೂಪರ್​ಸ್ಟಾರ್​ ರಜಿನಿಕಾಂತ್​ ನೋಡುವ ಆಸೆ: ಇಲ್ಲಿದೆ ವಿಶೇಷ​ ವಿಡಿಯೋ...

Rajinikanth
Published on

ಇಸ್ಲಮಾಬಾದ್​: ಕಳೆದ ಐದು ದಶಕಗಳಿಂದ ಸೂಪರ್​ ಸ್ಟಾರ್​ ರಜಿನಿಕಾಂತ್​ ಭಾರತೀಯ ಸಿನಿಮಾ ರಂಗವನ್ನು ಆಳುತ್ತಿದ್ದಾರೆ. ಇಂದಿಗೆ ಬಹುಬೇಡಿಕೆಯ ಹಾಗೂ ದುಬಾರಿ ಸಂಭಾವನೆ ಪಡೆಯುವ ನಟರಲ್ಲಿ ರಜಿನಿಕಾಂತ್​ ಸಹ ಒಬ್ಬರು. ತಮ್ಮ ಸ್ಟೈಲ್​ನಿಂದಲೇ ಜನರ ಮನ್ನಣೆ ಗಳಿಸಿರುವ ರಜಿನಿಕಾಂತ್​ಗೆ ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಅಭಿಮಾನಿಗಳ ಬಳಗವಿದೆ. ರಜಿನಿ ಸ್ಟೈಲ್​ ಅನ್ನು ಕಾಪಿ ಮಾಡುವವರು ಸಹ ಅನೇಕರಿದ್ದಾರೆ. ಇದೀಗ ವಿಡಿಯೋವೊಂದು ವೈರಲ್​ ಆಗಿದ್ದು, ಆ ವಿಡಿಯೋದಲ್ಲಿರುವ ವ್ಯಕ್ತಿ ರಜನಿ ಸ್ಟೈಲ್​ ಮಾತ್ರ ನಕಲು ಮಾಡಿಲ್ಲ, ನೋಡಲು ಕೂಡ ಥೇಟ್​ ರಜನಿಯಂತೇ ಇದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿಯ ಹೆಸರು ರೆಹಮತ್​​ ಗ್ಯಾಶ್ಕೊರಿ. ಈತ ಪಾಕಿಸ್ತಾನದ ನಿವೃತ್ತ ಸರ್ಕಾರಿ ನೌಕರ. ನೋಡಲು ಹೆಚ್ಚು ಕಡಿಮೆ ರಜಿನಿಕಾಂತ್​ ರೀತಿಯೇ ಇದ್ದಾರೆ. ಹೇರ್​ ಸ್ಟೈಲ್​ ಸಹ ಹಾಗೇ ಇದೆ. ಹೀಗಾಗಿ ಇವರನ್ನು ಪಾಕಿಸ್ತಾನದ ರಜಿನಿಕಾಂತ್​ ಎಂದು ಕರೆಯುತ್ತಾರೆ.

ನನ್ನ ನಡಿಗೆ, ದೇಹ ಭಾಷೆ, ಹೇರ್ ಸ್ಟೈಲ್ ಮತ್ತು ರೈಫಲ್ ಶೂಟಿಂಗ್ ಎಲ್ಲವೂ ರಜಿನಿಕಾಂತ್​ ರೀತಿಯೇ ಇದೆ ಎಂದು ಜನರು ಹೇಳುತ್ತಿದ್ದರು ಎಂದು ಸ್ವತಃ ರೆಹಮತ್ ಹೇಳಿದ್ದಾರೆ. ಆ ಬಳಿಕ ಅವರು ರಜನಿಯನ್ನು ಅನುಕರಿಸಲು ಪ್ರಾರಂಭಿಸಿದರಂತೆ. ಪಡಿಯಪ್ಪ ಸಿನಿಮಾದಲ್ಲಿ ಸಿಗರೇಟ್​ ಹಚ್ಚು ದೃಶ್ಯದಿಂದ ಹಿಡಿದು ರಜಿನಿಯ ಬಹುತೇಕ ಸಿನಿಮಾ ದೃಶ್ಯಗಳನ್ನು ರೆಹಮಾತ್​ ಮರುಸೃಷ್ಟಿಸಿದ್ದಾರೆ.

ಭಾರತೀಯ ಸಿನಿಮಾ ದಿಗ್ಗಜ ರಜಿನಿಕಾಂತ್​ ಅವರನ್ನು ಭೇಟಿಯಾಗಿ, ಅವರೊಂದಿಗೆ ಒಂದು ಫೋಟೋ ತೆಗೆದುಕೊಳ್ಳುವುದು ನನ್ನ ಒಂದು ಆಸೆ ಎಂದು ವಿಡಿಯೋದಲ್ಲಿ ರೆಹಮತ್​ ಹೇಳಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪತ್ರಕರ್ತರು ರೆಹಮತ್​ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಆತನ ಆಸೆಯನ್ನು ಪೂರೈಸುವಂತೆ ರಜಿನಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ರಜಿನಿ ಅವರ ಸಿನಿಮಾ ವಿಚಾರಕ್ಕೆ ಬಂದರೆ, ನೆಲ್ಸನ್ ನಿರ್ದೇಶನದ 'ಜೈಲರ್' ಚಿತ್ರೀಕರಣವನ್ನು ಶೀಘ್ರದಲ್ಲೇ ಪುನರಾರಂಭಿಸಲಿದ್ದಾರೆ. 71 ವರ್ಷದ ರಜಿನಿಕಾಂತ್​ ಈಗಾಗಲೇ ಇನ್ನು ಎರಡು ಸಿನಿಮಾಗಳಿ ಸಹಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net