

ಕರಾಚಿ: ಪಾಕಿಸ್ತಾನದ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಚುನಾವಣೆ ನಡೆದು ಐದು ದಿನ ಕಳೆದ ನಂತರವೂ ಯಾವುದೇ ಪಕ್ಷ ಸ್ಪಷ್ಟ ಬಹುಮತ ಗಳಿಸದೇ ಇರುವ ಹಿನ್ನೆಲೆಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದ್ದು ಸರ್ಕಾರ ರಚನೆ ಕುರಿತ ಗೊಂದಲ ಇನ್ನೂ ಮುಂದುವರಿದಿದೆ. ಪಾಕ್ ಚುನಾವಣಾ ಆಯೋಗ ಸೋಮವಾರ ಫಲಿತಾಂಶದ ಸಂಪೂರ್ಣ ಪಟ್ಟಿ ಪ್ರಕಟಿಸಿದೆಯಾದರೂ ಅನಿಶ್ಚಿತ ಪರಿಸ್ಥಿತಿ ಹಾಗೇ ಉಳಿದಿದೆ.
ಮಾಜಿ ಪ್ರಧಾನಿಗಳಾದ ಇಮ್ರಾನ್ ಖಾನ್ರ ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ತಾವೇ ಗೆದ್ದಿರುವುದಾಗಿ ಘೋಷಿಸಿ ಕೊಂಡಿವೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಯಾರಿಗೂ ಬಹುಮತ ಸಿಗದಿರುವುದರಿಂದ ಸಮ್ಮಿಶ್ರ ಸರ್ಕಾರ ರಚನೆ ಅನಿವಾರ್ಯವಾಗಲಿದ್ದು ಬೆಂಬಲ ಕ್ರೋಡೀಕರಿಸುವ ಕಸರತ್ತು ಆರಂಭವಾಗಿದೆ. ಪಕ್ಷೇತರನಾಗಿ ಗೆದ್ದಿದ್ದ ಇನ್ನೊಬ್ಬ ಸಂಸದ ಸೋಮವಾರ ಷರೀಫ್ ಪಕ್ಷಕ್ಕೆ ಬೆಂಬಲ ಘೋಷಿಸಿರುವುದರಿಂದ ಪಿಎಂಎಲ್-ಎನ್ ಉತ್ಸಾಹ ಹೆಚ್ಚಿದೆ. ಷರೀಫ್ ಪಕ್ಷಕ್ಕೆ ಬೆಂಬಲ ಕೊಟ್ಟ ಸ್ವತಂತ್ರರ ಸಂಖ್ಯೆ ಎರಡಕ್ಕೇರಿದೆ. ಈ ನಡುವೆ ಜಮಾತ್-ಇ-ಇಸ್ಲಾಮಿ ಪಕ್ಷದ ಹಿರಿಯ ನಾಯಕ ಹಫೀಜ್ ನಯಿಮುರ್ ರೆಹಮಾನ್ ತಾವು ಗೆದ್ದ ಕ್ಷೇತ್ರ ಪಿಟಿಐಗೆ ಬಿಟ್ಟುಕೊಟ್ಟ ಬಹು ಅಪರೂಪದ ವಿಲಕ್ಷಣ ಪ್ರಸಂಗ ನಡೆದಿದೆ. ಫೆ.8ರ ಚುನಾವಣೆಗಳಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿರುವುದನ್ನು ಎತ್ತಿ ತೋರಿಸಲು ತಾನು ಈ ಕ್ರಮ ಕೈಗೊಂಡಿದ್ದಾಗಿ ನಯೀಂ ಹೇಳಿದ್ದಾರೆ. ಕರಾಚಿ ಸೆಂಟ್ರಲ್-8 ಕ್ಷೇತ್ರದಿಂದ ನಯೀಂ ಗೆದ್ದಿರುವುದಾಗಿ ಆಯೋಗ ಪ್ರಕಟಿಸಿತ್ತು.
ಸಂಪೂರ್ಣ ಫಲಿತಾಂಶ: ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳ 854 ಸ್ಥಾನಗಳ ಚುನಾವಣೆಯ ಸಂಪೂರ್ಣ ಫಲಿತಾಂಶವನ್ನು ಆಯೋಗ ಸೋಮವಾರ ಪ್ರಕಟಿಸಿದ್ದು 348 ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಅವರಲ್ಲಿ ಬಹುತೇಕರು ಪಿಟಿಐ ಬೆಂಬಲಿತ ಹುರಿಯಾಳುಗಳಾಗಿದ್ದಾರೆ. 227 ಸ್ಥಾನಗಳೊಂದಿಗೆ ಷರೀಫ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಖಾನ್ ಪಕ್ಷ ಪಿಟಿಐ 160ರಲ್ಲಿ ಗೆದ್ದಿದೆ. 45 ಸ್ಥಾನದಲ್ಲಿ ಜಯದೊಂದಿಗೆ ಎಂಕ್ಯೂಎಂ-ಪಿ 3ನೇ ಸ್ಥಾನದಲ್ಲಿದೆ.