

ಇಸ್ಲಾಮಾಬಾದ್: ಭಾರತೀಯ ಕುಟುಂಬವೊಂದು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಈ ವೇಳೆ ಪಾಕಿಸ್ತಾನ ಪ್ರಜೆಯೊಬ್ಬ ಭಾರತೀಯ ಕುಟುಂಬಕ್ಕೆ ನೀಡಿದ ಅತಿಥಿ ಸತ್ಕಾರದ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಮಗಳ ಟೆನಿಸ್ ಪಂದ್ಯದ ಸಲುವಾಗಿ ಭಾರತೀಯ ಕುಟುಂಬವೊಂದು ಪಾಕಿಸ್ತಾನಕ್ಕೆ ತೆರಳಿತ್ತು. ಈ ವೇಳೆ ದಾರಿ ಲಿಫ್ಟ್ ಕೇಳಿದ್ದಾರೆ. ಕೂಡಲೇ ಪಾಕಿಸ್ತಾನಿ ಪ್ರಜೆ ತಾಹಿರ್ ಖಾನ್ ಎಂಬಾತ ತನ್ನ ಕಾರಿನಲ್ಲಿ ಲಿಫ್ಟ್ ನೀಡಿದ್ದಾನೆ. ದಾರಿ ಮಧ್ಯೆ ಇವರು ಭಾರತೀಯರು ಎಂದು ಗೊತ್ತಾಗುತ್ತಿದ್ದಂತೆ ತಾಹಿರ್ ಖಾನ್ಗೆ ಸಂತೋಷವಾಗಿದೆ. ಅಷ್ಟೇ ಅಲ್ಲದೆ, ತನ್ನ ಕಚೇರಿಗೆ ಕರೆದುಕೊಂಡು ಹೋಗಿ, ಊಟ ಮಾಡಿಯೇ ತೆರಳಬೇಕು ಎಂದು ಒತ್ತಾಯಮಾಡಿದ್ದಾನೆ.
ನಂತರ ನೀವು ಹೈದರಾಬಾದ್ ಬಿರಿಯಾನಿ ಸೇವಿಸಿರುತ್ತೀರಿ. ಇದೀಗ ನಾನು ಕೊಡಿಸುವ ಬಿರಿಯಾನಿ ಸೇವಿಸಿ ಎಂದು ಹೇಳಿದ್ದಾನೆ. ನಂತರ ಸಣ್ಣ ಔತಣ ಕೂಟವನ್ನೂ ಏರ್ಪಡಿಸಿ ಬೀಳ್ಕೊಟ್ಟಿದ್ದಾನೆ. ಈ ವಿಡಿಯೋವನ್ನು ಇಹ್ತಿಶಾಮ್ ಉಲ್ ಹಕ್ ಎಂಬ ಪಾಕಿಸ್ತಾನಿ ಪತ್ರಕರ್ತ ತನ್ನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಜತೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಬಾರತೀಯ ಕುಟುಂಬಕ್ಕೆ ನನ್ನ ಗೆಳೆಯ ತಾಹಿರ್ ಖಾನ್ ಡ್ರಾಪ್ ನೀಡಿದ್ದಾನೆ. ಇದು ನಿಜವಾದ ಪಾಕಿಸ್ತಾನ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಚರ್ಚಿಸಿರುವುದು ತಿಳಿಯುತ್ತದೆ. ಟಿ-20 ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್ ಹಂತ ತಲುಪಿದೆ. ಎರಡೂ ಬಲಿಷ್ಠ ತಂಡಗಳಾಗಿದ್ದು, ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ನಮಗೆ ಕೊಡಿ, ನೀವು ಪ್ರಶಸ್ತಿಯನ್ನು ತೆಗೆದುಕೊಳ್ಳಿ ಎಂದು ತಮಾಷೆಯ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್)