ಪಾಕ್- ತಾಲಿಬಾನ್ ಕದನ ವಿರಾಮ ಒಪ್ಪಂದ

Health (9)
Published on

ಇಸ್ತಾಂಬುಲ್/ದೋಹಾ: ಅಫ್ಘಾನಿಸ್ತಾನದ ತಾಲಿಬಾನ್ ಮತ್ತು ಪಾಕಿಸ್ತಾನ ನಡುವಿನ ಗಡಿ ಸಂಘರ್ಷಗಳು ತೀವ್ರಗೊಂಡಿದ್ದ ಬೆನ್ನಲ್ಲೇ, ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಎರಡೂ ದೇಶಗಳು ‘ತಕ್ಷಣದ ವಿರಾಮ’ಕ್ಕೆ ಒಪ್ಪಿಕೊಂಡಿವೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ 2,611 ಕಿ.ಮೀ. ಉದ್ದದ ‘ಡ್ಯುರಾಂಡ್ ಲೈನ್’ ಹೆಸರಿನ ಗಡಿ ಘರ್ಷಣೆಯ ಮೂಲವಾಗಿದೆ. ಅಫ್ಘಾನಿಸ್ತಾನ ಈ ಗಡಿಯನ್ನು ಔಪಚಾರಿಕವಾಗಿ ಒಪ್ಪಿಕೊಂಡಿಲ್ಲ. 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ತೀವ್ರಗೊಂಡಿದೆ. ಕಳೆದ ವಾರ ಗಡಿ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆದು ಎರಡೂ ದೇಶಗಳ ನೂರಾರು ಸೈನಿಕರು, ನಾಗರಿಕರು ಮೃತಪಟ್ಟಿದ್ದಾರೆ.

ದೋಹಾದಲ್ಲಿ ಮಧ್ಯಸ್ಥಿಕೆ: ದೋಹಾದಲ್ಲಿ ಕತಾರ್ ಮತ್ತು ಟರ್ಕಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಂತಿ ಒಪ್ಪಂದಕ್ಕೆ ಬರಲಾಗಿದೆ. ಪಾಕಿಸ್ತಾನದ ತಂಡವನ್ನು ರಕ್ಷಣಾ ಸಚಿವ ಖ್ವಾಜಾ ಅಸೀಫ್, ಐಎಸ್​ಐ ನಿರ್ದೇಶಕ ಲೆ. ಅಸಿಮ್ ಮಲಿಕ್ ಪ್ರತಿನಿಧಿಸಿದ್ದರು. ಅಫ್ಘಾನ್ ತಂಡವನ್ನು ರಕ್ಷಣಾ ಸಚಿವ ಮೊಹಮ್ಮದ್ ಯಾಕೂಬ್ ಪ್ರತಿನಿಧಿಸಿದ್ದರು.

ಒಪ್ಪಂದದ ಪ್ರಮುಖ ಅಂಶಗಳು?

ಎರಡೂ ದೇಶಗಳು ಗಡಿ ಕಾರ್ಯಾಚರಣೆಗಳನ್ನು ತಕ್ಷಣ ನಿಲ್ಲಿಸಬೇಕು.?ದೀರ್ಘಕಾಲದ ಶಾಂತಿಯನ್ನು ಖಚಿತಪಡಿಸುವ ಬಗ್ಗೆ ಸಂಸ್ಥೆಯೊಂದನ್ನು ಸ್ಥಾಪಿಸುವುದು. ?ಅ. 25ರಂದು ಇಸ್ತಾಂಬುಲ್​ನಲ್ಲಿ (ಟರ್ಕಿ) ಮುಂದಿನ ಸಭೆ. ?ಕದನ ವಿರಾಮದ ಅನುಸರಣೆಗಳ ಪರಿಶೀಲನೆಗೆ ಸಭೆಗಳನ್ನು ನಡೆಸುವುದು. ?ಗಡಿಯಲ್ಲಿ ಶಾಂತಿ ಮರುಸ್ಥಾಪನೆ ಮಾಡುವುದು.

ತಾಲಿಬಾನ್ ಎಚ್ಚರಿಕೆ

ಶಾಂತಿ ಒಪ್ಪಂದದ ಬೆನ್ನಲ್ಲೇ ತಾಲಿಬಾನ್ ಉಪ ಗೃಹ ಸಚಿವ ಮಾವ್ಲಾವಿ ಮುಹಮ್ಮದ್ ನಬಿ ಒಮರಿ ಪಾಕಿಸ್ತಾನ ಸೇನೆಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನ್ ತಂಟೆಗೆ ಬಂದರೆ ನಿಮ್ಮನ್ನು ಭಾರತ ಗಡಿಯವರೆಗೂ ಬೆನ್ನಟ್ಟುತ್ತೇವೆ. ಒಮ್ಮೆ ಅಫ್ಘಾನಿಸ್ತಾನದ ಜನರು ಮತ್ತು ಆಡಳಿತ ನಿಮ್ಮನ್ನು ಆಕ್ರಮಣಕಾರರು ಎಂದು ಘೋಷಣೆ ಮಾಡಿದರೆ, ಭಾರತದ ಗಡಿಯವರೆಗೂ ನೀವು ಸುರಕ್ಷಿತರಾಗಿರಲು ಸಾಧ್ಯವಿಲ್ಲ. ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಆಡಳಿತ ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗಿನ ಟ್ರಂಪ್ ಮತ್ತು ಶಹಬಾಜ್ ಷರೀಫ್ ವೀಡಿಯೋ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net