

ಪೇಶಾವರ್: ಇತ್ತೀಚೆಗೆ ಪಾಕಿಸ್ತಾನ, ರಾಜಕೀಯ ಪ್ರೇರಿತ ಕೊಲೆ ಪ್ರಯತ್ನ ವಿಷಯದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಇಮ್ರಾನ್ ಖಾನ್ ಕೊಲೆ ಪ್ರಯತ್ನ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಇದರಿಂದ ರೊಚ್ಚಿಗೆದ್ದ ಜನರು ಸೇನೆಯ ಟ್ಯಾಂಕ್ ಒಂದನ್ನು ಸುತ್ತುವರಿದು ಅದನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ.
ಅ.23ರಂದು ಪಾಕ್ ಸೇನೆಯ ವಿರುದ್ಧ ದನಿ ಎತ್ತಿದ್ದ ಪಾಕ್ ಪತ್ರಕರ್ತನನ್ನು ಕೀನ್ಯಾದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಆ ಸಂದರ್ಭದಲ್ಲಿ ಇಮ್ರಾನ್ ಖಾನ್ ಪಾಕ್ ಸೇನೆಯ ವಿರುದ್ಧ ಕ್ಯಾಮರಾ ಮುಂದೆಯೇ ವಾಗ್ದಾಳಿ ನಡೆಸಿದ್ದರು. ಈಗ ಹಕೀಕಿ ಆಝಾದಿ ಹೆಸರಿನ ರ್‍ಯಾಲಿ ಮೂಲಕ ಸರ್ಕಾರದ ವಿರುದ್ಧ ಯಾತ್ರೆ ನಡೆಸುತ್ತಿದ್ದಾರೆ. ನಿನ್ನೆ (ನ.3) ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದ ನಂತರ ಪಾಕಿಸ್ತಾನದಲ್ಲಿ ಜನರು ಬೀದಿಗಿಳಿದಿದ್ದಾರೆ. ಈ ಸಂದರ್ಭ ಪ್ರತಿಭಟನಾಕಾರರು ಪೊಲೀಸ್ ಟ್ಯಾಂಕ್ಗೆ ಮುತ್ತಿಗೆ ಹಾಕಿದ್ದಾರೆ.
ಇದರ ವಿಡಿಯೋವನ್ನು ಪಾಕ್ನ ವಜಾಹತ್ ಖಾನ್ ಎನ್ನುವ ಪತ್ರಕರ್ತ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ನಲ್ಲಿ 'ಇಮ್ರಾನ್ ಖಾನ್ ಮೇಲಿನ ದಾಳಿಯ ನಂತರ ಕೋಪಗೊಂಡ ಪ್ರತಿಭಟನಾಕಾರರು ಪೇಶಾವರ ಮತ್ತು ಇತರ ಹಲವು ನಗರಗಳಲ್ಲಿ ಮಿಲಿಟರಿಯ ಶಕ್ತಿಯ ಸಂಕೇತವಾದ ಪಾಕಿಸ್ತಾನದ ಪೊಲೀಸ್ ಟ್ಯಾಂಕ್ ಅನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ. 75 ವರ್ಷಗಳ ಇತಿಹಾಸದಲ್ಲಿ ಈ ರೀತಿಯ ಘಟನೆ ಪಾಕ್‌ನಲ್ಲಿ ನಡೆದಿಲ್ಲ' ಎಂದು ಬರೆದುಕೊಂಡಿದ್ದಾರೆ.