ಭಾರತವನ್ನು ಕೆಣಕಿದ ಪಾಕ್​ಗೆ ಮುಖಭಂಗ

India Pak
Published on

ನವದೆಹಲಿ: ದೆಹಲಿಯಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ಸಹಾಯಕ ಅಧಿಕಾರಿಗಳನ್ನು ಸಾಕ್ಷ್ಯ ಸಮೇತ ಹಿಡಿದು ಭಾರತ ಗಡಿಪಾರು ಮಾಡಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಸೋಮವಾರ ಬಂಧಿಸಿದ್ದ ಪಾಕಿಸ್ತಾನ, ಕೆಲವೇ ಗಂಟೆಗಳಲ್ಲಿ ಭಾರತದ ತೀವ್ರ ಆಕ್ರೋಶಕ್ಕೆ ಹೆದರಿ ಬಿಡುಗಡೆ ಮಾಡಿದೆ.

ಇಸ್ಲಾಮಾಬಾದ್​ನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಸೋಮವಾರ ಬಳಗ್ಗೆ 8.30ಕ್ಕೆ ದಿಢೀರ್ ಕಾಣೆಯಾಗಿದ್ದರು. ಈ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ ಭಾರತ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಇದಾದ ಸುಮಾರು 7 ತಾಸುಗಳ ಬಳಿಕ ಗುದ್ದೋಡು ಪ್ರಕರಣದಲ್ಲಿ ಇಬ್ಬರು ಭಾರತೀಯ ಅಧಿಕಾರಿಗಳನ್ನು ಬಂಧಿಸಿರುವುದಾಗಿ ಪಾಕ್ ಮಾಧ್ಯಮಗಳಲ್ಲಿ ವರದಿಯಾಯಿತು. ಭಾರತದ ಅಧಿಕಾರಿಗಳಿಬ್ಬರು ತಮ್ಮ ಕಚೇರಿಯಿಂದ ಬಿಎಂಡಬ್ಲ್ಯು ಕಾರಿನಲ್ಲಿ ತೆರಳುತ್ತಿದ್ದಾಗ ಪಾದಚಾರಿಯೊಬ್ಬನಿಗೆ ಗುದ್ದಿ ಪರಾರಿಯಾಗಿದ್ದರು. ಬಳಿಕ ಅವರನ್ನು ಜನರ ಗುಂಪು ತಡೆದು ಅಧಿಕಾರಿಗಳಿಗೆ ಒಪ್ಪಿಸಿತು. ಆ ಬಳಿಕವೇ ಅವರು ರಾಯಭಾರ ಕಚೇರಿ ಸಿಬ್ಬಂದಿ ಎಂದು ತಿಳಿದುಬಂದಿದೆ ಎಂದು ಹೇಳಲಾಗಿತ್ತು. ಭಾರತೀಯ ಅಧಿಕಾರಿಗಳ ಬಿಡುಗಡೆಯನ್ನು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಪ್ರತೀಕಾರಕ್ಕೆ ಕಿರುಕುಳ: ಪಾಕ್ ಬೇಹುಗಾರರನ್ನು ಭಾರತ ಗಡಿಪಾರು ಮಾಡಿದ ಬಳಿಕ, ಭಾರತೀಯ ರಾಯಭಾರ ಕಚೇರಿ ಮುಖ್ಯಸ್ಥ ಗೌರವ್ ಅಹ್ಲುವಾಲಿಯಾ ಹಾಗೂ ಇತರ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಭದ್ರತೆ ಮತ್ತು ಗುಪ್ತಚರ ಸಿಬ್ಬಂದಿ ಕಿರುಕುಳ ನೀಡಿದ್ದರು. ಅವರ ನಿವಾಸಗಳವರೆಗೆ ಹಿಂಬಾಲಿಸಿ ಬೆದರಿಕೆ ಹಾಕಿದ್ದರು. ಈ ಪುಂಡಾಟಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಳೆದ ಮಾರ್ಚ್​ನಿಂದ ಪಾಕಿಸ್ತಾನದಲ್ಲಿ ಭಾರತೀಯ ಅಧಿಕಾರಿಗಳನ್ನು ಶಂಕಾಸ್ಪದ ವ್ಯಕ್ತಿಗಳು ಹಿಂಬಾಲಿಸುತ್ತಿರುವ 13 ಘಟನೆಗಳು ನಡೆದಿವೆ. ಇಂಥ ಘಟನೆಗಳು ತಕ್ಷಣ ನಿಲ್ಲಬೇಕು ಎಂದು ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಈ ಹಿಂದೆ ಕೂಡ ಪತ್ರ ಬರೆದು ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಕತಾರ್​​ನಲ್ಲಿ ಸಂಕಷ್ಟದಲ್ಲಿದ್ದ 180 ಭಾರತೀಯರು ದೇಶಕ್ಕೆ ಮರಳಲು ಕರ್ನಾಟಕ ಸಂಘದ ಸಹಕಾರ…

ಸಿಕ್ಕಿಬಿದ್ದಿದ್ದ ಪಾಕಿಗಳು

ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ವೀಸಾ ಸಹಾಯಕ ಅಧಿಕಾರಿಗಳನ್ನು ದಿಲ್ಲಿ ಪೊಲೀಸ್​ನ ವಿಶೇಷ ಪಡೆ ಮೇ 31ರಂದು ರೆಡ್​ಹ್ಯಾಂಡ್ ಆಗಿ ಸೆರೆಹಿಡಿದಿತ್ತು. ಬಳಿಕ ಇಬ್ಬರಿಗೂ 24 ಗಂಟೆಯೊಳಗೆ ದೇಶ ತೊರೆಯುವಂತೆ ಆದೇಶಿಸಲಾಗಿತ್ತು. ಪಾಕಿಸ್ತಾನದ ಗುಪ್ತಚರದಳ ಐಎಸ್​ಐನ ಬೇಹುಗಾರರಾದ ಈ ಇಬ್ಬರು ರಾಜತಾಂತ್ರಿಕರ ವೇಷದಲ್ಲಿ ಗೂಢಚಾರ ಕೆಲಸಗಳನ್ನು ನಡೆಸುತ್ತಿದ್ದರು. ಬಂಧನದ ವೇಳೆ ಇವರ ಬಳಿ ನಕಲಿ ಆಧಾರ್ ಕಾರ್ಡ್ ಕೂಡ ಪತ್ತೆಯಾಗಿತ್ತು.

ತೀವ್ರ ಪ್ರತಿಭಟನೆ

ದೆಹಲಿಯಲ್ಲಿನ ಪಾಕ್ ರಾಯಭಾರ ಕಚೇರಿಗೆ ಸಮನ್ಸ್ ನೀಡಿದ ವಿದೇಶಾಂಗ ಸಚಿವಾಲಯ, ಸಿಬ್ಬಂದಿ ನಾಪತ್ತೆ ಘಟನೆ ಬಗ್ಗೆ ಪ್ರತಿಭಟನೆ ದಾಖಲಿಸಿತು. ಬಂಧಿತ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವಂತಿಲ್ಲ ಮತ್ತು ಕಿರುಕುಳ ನೀಡುವಂತಿಲ್ಲ. ಅವರನ್ನು ಕೂಡಲೇ ಇಸ್ಲಾಮಾಬಾದ್​ನ ಹೈಕಮಿಷನ್ ಕಚೇರಿಗೆ ಅಧಿಕೃತ ಕಾರಿನಲ್ಲೇ ತಂದು ಬಿಡಬೇಕು ಎಂದು ಆಗ್ರಹಿಸಿತು. ಪಾಕ್​ನ ಹೈಕಮಿಷನ್ ಕಚೇರಿಯ ಜತೆ ವಿದೇಶಾಂಗ ಸಚಿವಾಲಯ ನಿರಂತರ ಸಂಪರ್ಕದಲ್ಲಿತ್ತು.

ಐಎಸ್​ಐ ಕೈವಾಡ

ಭಾರತೀಯ ಅಧಿಕಾರಿಗಳ ಬಂಧನದ ಹಿಂದೆ ಪಾಕಿಸ್ತಾನದ ಗುಪ್ತಚರ ದಳ ಐಎಸ್​ಐನ ಕೈವಾಡವಿರುವುದು ಬಹುತೇಕ ಸ್ಪಷ್ಟವಾಗಿದೆ. ಪಾಕಿಸ್ತಾನದ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ಈ ಸಾಧ್ಯತೆಯನ್ನು ಪುಷ್ಟೀಕರಿಸಿವೆ. ಇದನ್ನೂ ಓದಿ:ಇಷ್ಟಪಟ್ಟವಳನ್ನು ವರಿಸಲು ಸುಶಾಂತ್​ಗೆ ಸಿಕ್ಕಿತ್ತು ಹಸಿರು ನಿಶಾನೆ! ಯಾರವಳು?

ಬಯಲಾಯ್ತು ಕುತಂತ್ರ

ಕುತಂತ್ರದಿಂದ ಭಾರತೀಯ ಅಧಿಕಾರಿಗಳನ್ನು ಬಂಧಿಸಿದ್ದ ಪಾಕ್, ಭಾರತ ಸರ್ಕಾರದ ರಾಜತಾಂತ್ರಿಕ ಪ್ರಭಾವಕ್ಕೆ ಮಣಿದು ಕೆಲವೇ ಗಂಟೆಗಳಲ್ಲಿ ಬಂಧಿತರನ್ನು ಬಿಡುಗಡೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net