

Pahalgam Terrorists Attack : ಏಪ್ರಿಲ್ 22ರ ಮಂಗಳವಾರದಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ಹಿಂದೆ ಪಾಕಿಸ್ತಾನ ಕೈವಾಡ ಇರುವುದು ಕಂಡುಬಂದಿದೆ. ಹೀಗಾಗಿ ಭಾರತ, ಪಾಕ್ ವಿರುದ್ಧ ರಾಜತಾಂತ್ರಿಕವಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ, ಉಭಯ ದೇಶಗಳ ನಡುವೆ ಯುದ್ಧದ ಭೀತಿ ಆವರಿಸಿದ್ದು, ಎರಡೂ ಕಡೆ ಸೇನೆಗಳು ಸಜ್ಜಾಗಿವೆ. ಇದರ ನಡುವೆ ಹದ್ದು ಮೀರಿ ವರ್ತಿಸುತ್ತಿರುವ ಪಾಕ್, ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿ ನಡೆಸಿದೆ. ಭಾರತವು ಕೂಡ ಇದಕ್ಕೆ ತಕ್ಕ ಉತ್ತರವನ್ನು ನೀಡಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಪಾಕಿಸ್ತಾನಿ ಪೋಸ್ಟ್ಗಳಿಂದ ರಾತ್ರಿಯಿಡೀ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಭಾರತೀಯ ಸೇನೆಯು ಕೂಡ ಪ್ರತಿದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನಿ ಸೇನೆಯು ಗಡಿಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳನ್ನು ಹಾರಿಸಿತು. ಈ ವೇಳೆ ನಮ್ಮ ಪಡೆಗಳು ಪ್ರತಿದಾಳಿ ನಡೆಸಿದವು. ಸದ್ಯ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈ ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ಉಭಯ ದೇಶಗಳ ನಡುವೆ ಹೊಸ ಬಿಕ್ಕಟ್ಟನ್ನು ಹುಟ್ಟುಹಾಕಿದ ಕೆಲವೇ ದಿನಗಳ ಬಳಿಕ ಈ ಗುಂಡಿನ ಚಕಮಕಿ ನಡೆದಿದೆ.
ಅಂದಹಾಗೆ, ಮಂಗಳವಾರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ "ಗಡಿಯಾಚೆಗಿನ ಸಂಪರ್ಕ" ಅಂದರೆ, ಪಾಕಿಸ್ತಾನ ಕುಮ್ಮಕ್ಕು ಇರುವುದನ್ನು ಗಮನದಲ್ಲಿಟ್ಟುಕೊಂಡು, ಆರು ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಅಟ್ಟಾರಿ ಭೂ-ಸಾರಿಗೆ ಪೋಸ್ಟ್ ಅನ್ನು ತಕ್ಷಣವೇ ಮುಚ್ಚುವುದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡಿದೆ. (ಏಜೆನ್ಸೀಸ್)