ನಾವು ಅಮಾಯಕರು, ನಮ್ಮ ಮನೆ ಛಿದ್ರಗೊಳಿಸಿದ್ದಾರೆ; ಪಹಲ್ಗಾಮ್​ ಉಗ್ರನ ಸಹೋದರಿ ಮಾತು | Pahalgam

My brother is Mujahideen'
Published on

Pahalgam Terror Attack: ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಉಸಿರು ಚೆಲ್ಲಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ ಒಟ್ಟು 26 ಮಂದಿಪ್ರಾಣವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ.

ಉಗ್ರರ ಹುಟ್ಟನ್ನು ಅಡಗಿಸಲು ಪಣತೊಟ್ಟಿರುವ ಭಾರತೀಯ ಸೇನೆ, ನಿನ್ನೆ (ಏ.25) ಇಬ್ಬರು ಉಗ್ರರ ಮನೆಗಳನ್ನು ಉಡೀಸ್ ಮಾಡಿತು. ಇದು ಪ್ರತೀಕಾರದ ಸಂಕೇತವಾಯಿತು. ಗುಂಡಿನ ದಾಳಿಯಲ್ಲಿ ಭಾಗಿಯಾದ ಇಬ್ಬರು ಉಗ್ರರ ಮನೆಗಳನ್ನು ಸೇನೆ ಸ್ಫೋಟಗೊಳಿಸಿತು. ಲಷ್ಕರ್-ಎ-ತೈಬಾ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಶಿಫ್ ಶೇಖ್ ಎಂಬ ಭಯೋತ್ಪಾದಕರ ಮನೆಗಳನ್ನು ಸೇನೆಯು ಐಇಡಿಗಳಿಂದ ಛಿದ್ರಗೊಳಿಸಿತು.

ಅನಂತನಾಗ್ ಜಿಲ್ಲೆಯ ಥೋಕರ್, ಪಹಲ್ಗಾಮ್ ದಾಳಿಯ ಆರೋಪಿ. ಆಶಿಫ್ ಶೇಖ್ ಎಂಬ ಮತ್ತೊಬ್ಬ ವ್ಯಕ್ತಿ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದರ ಪರಿಣಾಮವಾಗಿ ಇಬ್ಬರ ಮನೆಗಳನ್ನು ಸ್ಫೋಟಗೊಳಿಸಲಾಯಿತು. "ಭಯೋತ್ಪಾದಕ ಕೃತ್ಯ ಎಸಗಿದ ನನ್ನ ಸಹೋದರ ಮುಜಾಹಿದ್ದೀನ್. ನನ್ನ ಒಬ್ಬ ಅಣ್ಣ ಜೈಲಿನಲ್ಲಿದ್ದಾನೆ. ಇನ್ನೊಬ್ಬನೇ ಈ 'ಮುಜಾಹಿದ್ದೀನ್' (ಆದಿಲ್ ಹುಸೇನ್ ಥೋಕರ್)​. ನನಗೂ ಇಬ್ಬರು ಸಹೋದರಿಯರಿದ್ದಾರೆ. ನಿನ್ನೆ ನಾನು ನನ್ನ ಅತ್ತೆಯ ಮನೆಯಿಂದ ನಮ್ಮ ಮನೆಗೆ ಬಂದಾಗ ಮನೆಯಲ್ಲಿ ಪೋಷಕರು ಇರಲಿಲ್ಲ. ಕಾರಣ, ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು" ಎಂದು ಉಗ್ರರ ಸಹೋದರಿ ಹೇಳಿದರು.

"ನಾನು ನನ್ನ ಹೆತ್ತವರ ಮನೆಗೆ ಬಂದಾಗ, ಮನೆಯಲ್ಲಿ ಯಾರೊಬ್ಬರು ಇರಲಿಲ್ಲ. ನಾನು ಇಲ್ಲಿಗೆ ಬಂದ ಕೆಲವೇ ಕ್ಷಣಗಳಲ್ಲಿ ಭದ್ರತಾ ಪಡೆಗಳು ಆಗಮಿಸಿತು. ಸೇನಾ ಅಧಿಕಾರಿಗಳು ನನ್ನನ್ನು ನೆರೆಹೊರೆಯವರ ಮನೆಗೆ ಹೋಗುವಂತೆ ತಿಳಿಸಿದರು. ಸಮವಸ್ತ್ರದಲ್ಲಿದ್ದ ಓರ್ವ ವ್ಯಕ್ತಿ ನಮ್ಮ ಮನೆಯ ಮೇಲೆ ಬಾಂಬ್ ತರಹದ ವಸ್ತುವನ್ನು ಇಟ್ಟಿದ್ದನ್ನು ನಾನು ನೋಡಿದೆ. ಅದಾದ ಕೆಲವೇ ಕ್ಷಣಗಳಲ್ಲಿ ಮನೆ ಸ್ಫೋಟಗೊಂಡಿತು. ನಾವು ಅಮಾಯಕರು. ಅವರೆಲ್ಲ ನಮ್ಮ ಮನೆ ಧ್ವಂಸ ಮಾಡಿದ್ದಾರೆ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net