

Pahalgam Terror Attack : ಮಂಗಳವಾರ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ದೇಶಾದ್ಯಂತ ತೀವ್ರ ಕಳವಳವನ್ನುಂಟುಮಾಡಿದೆ.
ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಇಲ್ಲಿಯವರೆಗೆ 28 ಪ್ರವಾಸಿಗರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. 20ಕ್ಕೂ ಹೆಚ್ಚು ಪ್ರವಾಸಿಗರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ನೂರಾರು ಪ್ರವಾಸಿಗರು ಪಹಲ್ಗಾಮ್ನ ಪ್ರಕೃತಿಯ ಮಡಿಲಲ್ಲಿ ಓಡಾಡುತ್ತಿರುವಾಗ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆ ಸ್ಥಳದಲ್ಲಿ ಯಾರೂ ನಿರೀಕ್ಷೆ ಮಾಡದ ಘಟನೆ ನಡೆಯಿತು. ಭಾರತೀಯ ಸೇನಾ ಸಮವಸ್ತ್ರದಲ್ಲಿದ್ದ ನಾಲ್ವರು ದಟ್ಟ ಕಾಡಿನಿಂದ ಹೊರಬಂದು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗೈದರು. ಈ ಘಟನೆಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಯೋತ್ಪಾದಕರು ಮಿಲಿಟರಿ ಸಮವಸ್ತ್ರದಲ್ಲಿ ಬಂದಿದ್ದರಿಂದ ಇದೀಗ ಪ್ರವಾಸಿಗರು ನಿಜವಾದ ಭಾರತೀಯ ಸೈನಿಕರನ್ನು ನೋಡಲು ಸಹ ಹೆದರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸ್ಥಳೀಯರು ಗಾಯಗೊಂಡ ಮಹಿಳೆ ಮತ್ತು ಹುಡುಗನನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಾರೆ. ಇತ್ತ ಭಾರತೀಯ ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ಸೇನಾ ಸಮವಸ್ತ್ರದಲ್ಲಿರುವ ನಿಜವಾದ ಸೈನಿಕರನ್ನು ನೋಡಿದ ನಂತರ ಹುಡುಗ ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದನು. ಮಹಿಳೆಯು ಕೂಡ ಭಯದಿಂದ ಅಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಮಿಲಿಟರಿ ಸಮವಸ್ತ್ರದಲ್ಲಿದ್ದ ಭಯೋತ್ಪಾದಕರು ತನ್ನ ತಂದೆಯನ್ನು ಕ್ರೂರವಾಗಿ ಗುಂಡಿಕ್ಕಿ ಕೊಂದದ್ದನ್ನು ನೋಡಿದ ಹುಡುಗ ನಿಜವಾದ ಸೈನಿಕರನ್ನು ನೋಡಿ ಭಯದಿಂದ ಕೂಗಿದನು. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ.. ನನ್ನ ಮಗನನ್ನು ಕೊಲ್ಲಬೇಡಿ ಎಂದು ತಾಯಿ ಬೇಡಿಕೊಂಡರು. ಇದಕ್ಕೆ ಅಲ್ಲಿನ ಸೈನಿಕರು, ನಾವು ನಿಜವಾದ ಸೈನಿಕರು, ನಾವು ನಿಮ್ಮನ್ನು ರಕ್ಷಿಸಲು ಬಂದಿದ್ದೇವೆ ಎಂದು ಮನವರಿಕೆ ಮಾಡಿದರು. ಈ ವಿಡಿಯೋ ನೋಡಿದರೆ ನಿಜಕ್ಕೂ ಮನಕಲಕುತ್ತದೆ. ಮಹಿಳೆಯ ಅಳಲನ್ನು ನೋಡಿದ ನೆಟ್ಟಿಗರು ಸಹ ಭಾವುಕರಾಗಿದ್ದಾರೆ.
ಕಾಶ್ಮೀರಕ್ಕೆ ಇತ್ತೀಚೆಗೆ ಪ್ರವಾಸಿಗರ ಆಗಮನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ ಎಂದು ಭದ್ರತಾ ಪಡೆಗಳು ನಂಬಿವೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಮಿಲಿಟರಿ ಸಮವಸ್ತ್ರ ಧರಿಸಿದ ಐದು ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂದು ನಂಬಲಾಗಿದೆ. ಗುಂಡಿನ ದಾಳಿಯ ನಂತರ, ಅವರು ಹತ್ತಿರದ ಕಾಡಿಗೆ ಓಡಿಹೋದರು ಎಂದು ತಿಳಿದುಬಂದಿದೆ.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 28 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.