

Pahalgam attack : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರ ಮಂಗಳವಾರದಂದು ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಮೃತಪಟ್ಟ 26 ಪ್ರವಾಸಿಗರಲ್ಲಿ ಸುಮಾರು 20 ಪುರುಷರ ಪ್ಯಾಂಟ್‌ಗಳನ್ನು ಉಗ್ರರು ಬಿಚ್ಚಿಸಿದ್ದಾರೆ. ಅಲ್ಲದೆ, ಉಳಿದ ಪ್ರವಾಸಿಗರ ಪ್ಯಾಂಪ್ ಜಿಪ್ ಅನ್ನು ತೆರೆಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿದ ವಿವರಗಳ ಪ್ರಕಾರ, ಭಯೋತ್ಪಾದಕರು ತಾವು ಕೊಲ್ಲಲು ಬಯಸಿದ ಪುರುಷರ ಧರ್ಮವನ್ನು ಕಂಡುಹಿಡಿಯಲು ಈ ಕೃತ್ಯ ಎಸಗಿದ್ದಾರೆ. ಮುಸ್ಲಿಮರು ಸುನ್ನತಿಗೆ ಒಳಗಾಗುವುದರಿಂದ, ಪುರುಷರ ಪ್ಯಾಂಟ್ ಬಿಚ್ಚಿಸಿ ನೋಡಿ, ಯಾರು ಇಸ್ಲಾಮಿಕ್ ಧರ್ಮಕ್ಕೆ ಸೇರಿದವರು ಎಂದು ತಿಳಿಯಲು ಸಾಧ್ಯವಿದೆ. ಹೀಗಾಗಿ, ಭಯೋತ್ಪಾದಕರು ಧರ್ಮವನ್ನು ನಿರ್ಧರಿಸಲು ಮತ್ತು ಬೇರೆ ಧರ್ಮದ ಜನರನ್ನು ಕೊಲ್ಲಲು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಅಲ್ಲಿನ ಆಡಳಿತಾಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಉಗ್ರರ ಗುಂಡಿನ ದಾಳಿಗೆ ಬಲಿಯಾದವರನ್ನು ನೋಡಿದರು. ಆ ಸಮಯದಲ್ಲಿ, ಭಯೋತ್ಪಾದಕರು 26 ಸಂತ್ರಸ್ತರರಲ್ಲಿ 20 ಮಂದಿಯ ಒಳ ಉಡುಪುಗಳನ್ನು ಬಲವಂತವಾಗಿ ಹೊರತೆಗೆಸಿದ್ದರು. ಗುಂಡಿನ ದಾಳಿಗೆ ಬಲಿಯಾದವರ ಒಳ ಉಡುಪು/ಖಾಸಗಿ ಭಾಗಗಳು ಬಹಿರಂಗವಾಗಿರುವುದನ್ನು ಅಧಿಕಾರಿಗಳು ಗಮನಿಸಿದರು.
ಭಯೋತ್ಪಾದಕರ ಕೃತ್ಯದಿಂದ ಮೃತರ ಸಂಬಂಧಿಕರು ಸಹ ಆಘಾತಕ್ಕೆ ಒಳಗಾಗಿದ್ದರು. ಅದೇ ಆಘಾತದಲ್ಲಿ ಶವಗಳ ಮೇಲಿನ ಬಟ್ಟೆಗಳ ಸ್ಥಿತಿಯನ್ನೂ ಗಮನಿಸರಲಿಲ್ಲ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಶವಗಳನ್ನು ನೋಡಿ, ಬಿಳಿ ಬಟ್ಟೆಗಳಿಂದ ಮುಚ್ಚಿದರು. ಭಯೋತ್ಪಾದಕರು ಮೃತ ಪುರುಷರನ್ನು ಕ್ರೂರವಾಗಿ ಪರೀಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಜನರ ಧರ್ಮವನ್ನು ನಿರ್ಧರಿಸಲು ಭಯೋತ್ಪಾದಕರು ಪ್ರಾಚೀನ ವಿಧಾನವನ್ನು ಬಳಸಿದ್ದಾರೆಂದು ಹೇಳಿದ್ದಾರೆ.
ಭಯೋತ್ಪಾದಕರು ಮೊದಲು ಸಂತ್ರಸ್ತರ ಆಧಾರ್ ಕಾರ್ಡ್‌ಗಳು ಮತ್ತು ಚಾಲನಾ ಪರವಾನಗಿಗಳಂತಹ ಗುರುತಿನ ಚೀಟಿಗಳನ್ನು ತೋರಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ, ಮುಸ್ಲಿಂ ಪ್ರಾರ್ಥನೆಯಾದ ಕಲ್ಮಾವನ್ನು ಪಠಿಸಲು ಸಹ ಕೇಳಿದರು. ನಂತರ ಅವರು ಸುನ್ನತಿಯನ್ನು ಪರೀಕ್ಷಿಸಲು ಒಳ ಉಡುಪುಗಳನ್ನು ತೆಗೆಸಿದ್ದಾರೆ. ಈ ಮೂರು ಪರೀಕ್ಷೆಗಳ ಮೂಲಕ ಸಂತ್ರಸ್ತರು ಹಿಂದೂಗಳು ಎಂದು ದೃಢವಾದ ನಂತರ ಅವರಿಗೆ ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ 26 ಜನರಲ್ಲಿ 25 ಜನರು ಹಿಂದೂಗಳಾಗಿದ್ದರು. ಓರ್ವ ಮುಸ್ಲಿಂ ಯುವಕನಾಗಿದ್ದು, ಅವನು ಉಗ್ರರಿಂದ ಬಂದೂಕು ಕಿತ್ತುಕೊಂಡು ಪ್ರತಿದಾಳಿ ನಡೆಸಲು ಯತ್ನಿಸಿದ್ದರಿಂದ ಆತನಿಗೂ ಗುಂಡಿಕ್ಕಿ ಕೊಲ್ಲಲಾಯಿತು.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)