

ರಾಣೆಬೆನ್ನೂರ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದರೆ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿ ಹಣ ಪೀಕುತ್ತಿದ್ದ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಂತ್ರಸ್ತರು ಸಿಎಂ ಜನಸಂಪರ್ಕ ಕಚೇರಿ ಎದುರು ಧರಣಿಗೆ ಮುಂದಾಗಿದ್ದಾರೆ.
2010ರಲ್ಲಿ ರಾಣೆಬೆನ್ನೂರ ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಪಿ. ಶಾಂತ ಎಂಬುವರು ಹೊಟ್ಟೆನೋವು ಎಂದು ಆಸ್ಪತ್ರೆಗೆ ಬರುವ ಬಡ ಹಾಗೂ ಕೂಲಿ ಕಾರ್ವಿುಕ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ವಿನಾಕಾರಣ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಅದಕ್ಕಾಗಿ ರೋಗಿ ಕಡೆಯಿಂದ ಔಷಧ ಖರ್ಚು ಎಂದು 10ರಿಂದ 15 ಸಾವಿರ ರೂ. ವಸೂಲಿ ಮಾಡುತ್ತಿದ್ದರು. 2016ರವರೆಗೆ ಒಟ್ಟು 1520 ಮಹಿಳೆಯರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅದರಲ್ಲಿ ಮದುವೆ ಆಗದ ಯುವತಿಯರು ಸೇರಿದ್ದಾರೆ. ಆದರೆ, ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ಬೇರೆಡೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಡಾ. ಪಿ. ಶಾಂತ ಕರಾಮತ್ತು ಬಯಲಿಗೆ ಬಂದಿತ್ತು. ಅಂದಿನಿಂದ ವೈದ್ಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತಮಗೆ ಪರಿಹಾರ ನೀಡುವಂತೆ ಮಹಿಳೆಯರು ಪ್ರತಿಭಟನೆ ಮಾಡುತ್ತಲೆ ಬಂದಿದ್ದಾರೆ. ಅಂದಿನ ಆರೋಗ್ಯ ಸಚಿವ ರಮೇಶ್ ಕುಮಾರ್, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಕೂಡ ಮಹಿಳೆಯರನ್ನು ಭೇಟಿ ಮಾಡಿ, ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ, ಮಹಿಳೆಯರ ಗರ್ಭಕ್ಕೆ ಕತ್ತರಿ ಹಾಕಿದ ವೈದ್ಯ ಬೇರೆಡೆ ವರ್ಗಾವಣೆಯಾಗಿದ್ದಾರೆ ಹೊರತು ನಮಗೆ ನ್ಯಾಯ ದೊರೆತಿಲ್ಲ ಎಂಬುದು ಮಹಿಳೆಯರ ಅಳಲು.
ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಪಾದಯಾತ್ರೆ ಹಮ್ಮಿಕೊಳ್ಳುವ ಕುರಿತು ಏ. 6ರಂದು ಜಿಲ್ಲಾಡಳಿತ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಆಗ ಪರವಾನಗಿ ನೀಡಿದ ಜಿಲ್ಲಾಡಳಿತ ಏ. 25ರಂದು ನಾವು ಪಾದಯಾತ್ರೆ ಆರಂಭಿಸುತ್ತಿದ್ದಂತೆ ಪರವಾನಗಿ ರದ್ದುಪಡಿಸಿ ಆದೇಶ ಹೊರಡಿಸಿರುವುದು ಸೂಕ್ತವಲ್ಲ. ನಾವು ಪಾದ ಯಾತ್ರೆ ಮುಂದುವರಿಸು ತ್ತೇವೆ ಎಂದು ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಬರುವವರೆಗೂ ಧರಣಿ: ನೊಂದ ಮಹಿಳೆಯರು ನಗರದ ಕೆಇಬಿ ಗಣೇಶ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿಯ ವಿರಕ್ತಮಠದ ಶ್ರೀ ಗುರುಬಸವಾನಂದ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಹಾಸಿಗೆ, ಬಟ್ಟೆ ಸಮೇತ ಪಾದಯಾತ್ರೆ ಕೈಗೊಂಡಿರುವ ಮಹಿಳೆಯರು ಮೋಟೆಬೆನ್ನೂರ, ಬಂಕಾಪುರ ಮೂಲಕ ಏ. 27ರಂದು ಬೆಳಗ್ಗೆ 10.30ಕ್ಕೆ ಶಿಗ್ಗಾಂವಿಯ ಸಿಎಂ ಬಸವರಾಜ ಬೊಮ್ಮಾಯಿ ಅವರ ಜನಸಂಪರ್ಕ ಕಚೇರಿಗೆ ತಲುಪಲಿದ್ದಾರೆ. ಅಲ್ಲಿ ಸಿಎಂ ಬಂದು ಸಮಸ್ಯೆಗೆ ಪರಿಹಾರ ಸೂಚಿಸುವವರೆಗೂ ಧರಣಿ ನಡೆಸಲಿದ್ದಾರೆ ಎಂದು ನೇತೃತ್ವ ವಹಿಸಿದ್ದ ರವೀಂದ್ರಗೌಡ ಪಾಟೀಲ ‘ವಿಜಯವಾಣಿ’ಗೆ ತಿಳಿಸಿದರು.