Coldrif syrup | ಕೆಮ್ಮಿನ ಸಿರಪ್‌ ಸೇವಿಸಿ 21 ಮಕ್ಕಳ ಸಾವು; ತಯಾರಕ ರಂಗನಾಥನ್ ಬಂಧನ

maker of Coldrif syrup, arrested
Published on

Coldrif syrup: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕನಿಷ್ಠ 21 ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ರಾಸಾಯನಿಕ ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾದ ನಂತರ, ಸಿರಪ್ ತಯಾರಕ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಮಾಲೀಕ ರಂಗನಾಥನ್ ಗೋವಿಂದನನ್ನು ಬುಧವಾರ ತಡರಾತ್ರಿ ಚೆನ್ನೈನಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿ ರಂಗನಾಥರನ್ನು ಹೆಚ್ಚಿನ ಸಾವುಗಳ ಸಂಭವಿಸಿದ ಕುರಿತು ವರದಿಯಾಗಿರುವ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿದ್ದು, ಮಧ್ಯಪ್ರದೇಶ ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆದ ಸ್ವಲ್ಪ ಸಮಯದ ನಂತರ ಈ ಬಂಧನ ನಡೆದಿದೆ ಎನ್ನಲಾಗಿದೆ.

ಪ್ರಾಥಮಿಕ ತನಿಖೆ ಪ್ರಕಾರ ಕೆಮ್ಮಿನ ಸಿರಪ್ ಮಧ್ಯಪ್ರದೇಶದ ಹೊರತಾಗಿ, ಒಡಿಶಾ ಮತ್ತು ಪುದುಚೇರಿಗೂ ಸಹ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ 26 ಪುಟಗಳ ವರದಿಯು ಕಾನ್ಸೀಪುರದ ಔಷಧ ಕಾರ್ಖಾನೆಯಲ್ಲಿ ಕೆಮ್ಮಿನ ಸಿರಪ್ ಅನ್ನು ಅನೈರ್ಮಲ್ಯ ಸ್ಥಿತಿಯಲ್ಲಿ ತಯಾರಿಸಲಾಗಿದೆ ಎಂಬುದನ್ನು ಬಯಲು ಮಾಡಿದೆ. ರಾಜ್ಯ ನಿಯಂತ್ರಣ ಸಂಸ್ಥೆ ಗುರುತಿಸಿರುವ 350 ಉಲ್ಲಂಘನೆಗಳಲ್ಲಿ ತುಕ್ಕು ಹಿಡಿದ ಉಪಕರಣಗಳು ಮತ್ತು ಔಷಧೇತರ ರಾಸಾಯನಿಕಗಳ ಅಕ್ರಮ ಬಳಕೆಯೂ ಸೇರಿವೆ.

ತಮಿಳುನಾಡು ನಿಯಂತ್ರಣ ಸಂಸ್ಥೆ ನಡೆಸಿದ ತಪಾಸಣೆಯಲ್ಲಿ ಕೈಗಾರಿಕಾ ದ್ರವದ ಶೇಕಡಾ 48 ರಷ್ಟು ವರೆಗೆ ಸೇರಿಸಲ್ಪಟ್ಟಿದೆ ಎಂದು ಕಂಡುಬಂದಿದೆ, ಅನುಮತಿಸುವ ಮಿತಿ ಕೇವಲ ಶೇಕಡಾ 0.1 ರಷ್ಟಿದ್ದರೂ ಸಹ. ಉತ್ತಮ ಉತ್ಪಾದನಾ ಅಭ್ಯಾಸಗಳ (GMP) ಪ್ರಮಾಣೀಕರಣದ ಕೊರತೆಯ ಹೊರತಾಗಿಯೂ, ರಂಗನಾಥನ್ ಅವರ ಕಂಪನಿಯು ಜೆನೆರಿಕ್ ಔಷಧವನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ಮುಂದುವರೆಸಿತ್ತು ಎನ್ನಲಾಗಿದೆ.

ಕೋಲ್ಡ್ರಿಫ್‌ನಲ್ಲಿ ವಿಷಕಾರಿ ರಾಸಾಯನಿಕ ಪತ್ತೆಯಾದ ನಂತರ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಔಷಧದ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸುವಂತೆ ವಿನಂತಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಉತ್ಪಾದನಾ ಘಟಕಗಳಲ್ಲಿ ನಿಯಂತ್ರಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಔಷಧ ನಿಯಂತ್ರಕರ ಮೇಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಫಾರ್ಮ್ 25, ಅಥವಾ ಸಾಮಾನ್ಯ ಸೂತ್ರೀಕರಣ ಅಲೋಪತಿ ಔಷಧಗಳನ್ನು ತಯಾರಿಸುವ ಪರವಾನಗಿಯನ್ನು ಆಯಾ ರಾಜ್ಯ ಔಷಧ ನಿಯಂತ್ರಕರು ನೀಡುತ್ತಾರೆ ಮತ್ತು ನಿಯಂತ್ರಿಸುತ್ತಾರೆ. ಆದಾಗ್ಯೂ, ಪರವಾನಗಿ ರದ್ದತಿಯ ಅಂತಿಮ ನಿರ್ಧಾರವು ರಾಜ್ಯ ಔಷಧ ನಿಯಂತ್ರಕರ ಮೇಲಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net