ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

sonu sood
Published on

ನವದೆಹಲಿ: ಕೋವಿಡ್​ ಸಮಯದಲ್ಲಿ ಸಾಕಷ್ಟು ಜನಸೇವೆ ಮಾಡಿದ್ದ ನಟ ಸೋನು ಸೂದ್​ ಅವರು ₹ 20 ಕೋಟಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಸತತ ಮೂರು ದಿನಗಳ ಕಾಲ ಅವರ ಮುಂಬೈ ಮನೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ ನಂತರ ಐಟಿ ಅಧಿಕಾರಿಗಳು ಇಂದು ಈ ಹೇಳಿಕೆ ನೀಡಿದ್ದಾರೆ.

ಜೊತೆಗೆ, ಸೂದ್ ಅವರ ನಾನ್​ಪ್ರಾಫಿಟ್​ ಸಂಸ್ಥೆ, ಸೂದ್​ ಚ್ಯಾರಿಟಿ ಫೌಂಡೇಶನ್​​, ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಮಾಡಿ, ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ವಿದೇಶಿ ಕೊಡುಗೆದಾರರಿಂದ ಸುಮಾರು 2.1 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದೂ ಐಟಿ ಇಲಾಖೆ ಆರೋಪಿಸಿದೆ.

"ಸೂದ್​ ಮತ್ತು ಅವರ ಸಹಚರರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ವೇಳೆ ತೆರಿಗೆ ವಂಚನೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಲೆಕ್ಕ ಹೊಂದಿಲ್ಲದ ಆದಾಯಗಳನ್ನು ಬೋಗಸ್​​ ಅನ್​ಸೆಕ್ಯೂರ್ಡ್​ ಲೋನ್​ಗಳಾಗಿ ತೋರಿಸುವ ವಿಧಾನವನ್ನು ಅವರು ಅನುಸರಿಸಿರುವುದು ಕಂಡುಬಂದಿದೆ. ಈ ರೀತಿಯಾಗಿ 20 ಎಂಟ್ರಿಗಳು ಕಂಡುಬಂದಿದ್ದು, ಒಟ್ಟು ವಂಚಿಸಲಾದ ತೆರಿಗೆ ಮೊತ್ತವು 20 ಕೋಟಿ ರೂ.ಗಿಂತ ಹೆಚ್ಚಾಗಿದೆ" ಎಂದು ಐಟಿ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್​ ಸಂತ್ರಸ್ತರಿಗೆ ಭಾರೀ ಮೊತ್ತದ ದೇಣಿಗೆಗಳನ್ನು ನೀಡಿ ಹೆಸರು ಮಾಡಿರುವ ಸೋನು ಸೂದ್​, ಈ ಕೆಲಸಗಳಿಗಾಗಿ ಕಳೆದ ವರ್ಷ ಜುಲೈನಲ್ಲಿ ಆರಂಭಿಸಿದ ಸೂದ್​​ ಚಾರಿಟಿ ಫೌಂಡೇಶನ್​ ಬಗೆಗೂ ಐಟಿ ಇಲಾಖೆ ಕೆಲವು ಆಕ್ಷೇಪಗಳನ್ನು ಹೊರಹಾಕಿದೆ. ಈ ಸಂಸ್ಥೆಯು 2021 ರ ಏಪ್ರಿಲ್​ವರೆಗೆ 18 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆಗಳನ್ನು ಸಂಗ್ರಹಿಸಿದೆ. ಆ ಮೊತ್ತದಲ್ಲಿ ಕೇವಲ 1.9 ಕೋಟಿ ರೂ.ಗಳನ್ನು ಪರಿಹಾರ ಕಾರ್ಯಗಳಿಗೆ ಬಳಸಲಾಗಿದ್ದು, ಉಳಿದ ಸುಮಾರು 17 ಕೋಟಿ ರೂ. ಫೌಂಡೇಶನ್ನಿನ ಬ್ಯಾಂಕ್​ ಖಾತೆಯಲ್ಲಿ ಹಾಗೇ ಇದೆ ಎಂದು ತಿಳಿಸಿದೆ.

ಸೂದ್ ಇತ್ತೀಚೆಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರದೊಂದಿಗೆ ಸಾಮಾಜಿಕ ಕಾರ್ಯಕ್ರಮಗಳ ಸಂಬಂಧವಾಗಿ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಆದ್ದರಿಂದ ಕೇಂದ್ರದ ಬಿಜೆಪಿ ಸರ್ಕಾರ ಸೂದ್​ ವಿರುದ್ಧ ರಾಜಕೀಯ ಪ್ರೇರಿತವಾದ ತನಿಖೆ ಆದೇಶಿಸಿದೆ ಎಂದು ಸೂದ್​ ಅಭಿಮಾನಿಗಳು ಮತ್ತು ರಾಜಕೀಯ ನಾಯಕರು ಆರೋಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net