ಮೋದಿ ಜನ್ಮದಿನಕ್ಕೆ 'ರಾಷ್ಟ್ರೀಯ ನಿರುದ್ಯೋಗ ದಿನ'ದ ಪ್ರತ್ಯುತ್ತರ!

modiunemploy
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟಿದಹಬ್ಬದ ಸಂದರ್ಭಕ್ಕೆ ವಿರೋಧ ಪಕ್ಷ ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ ಅವರು "ಹ್ಯಾಪಿ ಬರ್ತ್​ಡೇ, ಮೋದಿ ಜಿ" ಎಂದು ಚುಟುಕಾಗಿ ವಿಶ್​ ಮಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಹುತೇಕ ನಿತ್ಯವೂ ಟೀಕಾತ್ಮಕ ಹೇಳಿಕೆಗಳನ್ನು ಶೇರ್​ ಮಾಡುವ ತಮ್ಮ ಟ್ವಿಟರ್​ ಖಾತೆಯಲ್ಲಿ ರಾಗಾ ಈ ಶುಭ ಹಾರೈಕೆಯನ್ನು ಶೇರ್​ ಮಾಡಿದ್ದಾರೆ.

ಮೋದಿ ಜನ್ಮದಿನಕ್ಕೆ ಅವರ ಬೆಂಬಲಿಗರು ಹಾಗೂ ವಿರೋಧಿಗಳು ಸಮಾನವಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮೋದಿ ವಿರುದ್ಧ ಆಗಾಗ ಹೇಳಿಕೆ ನೀಡುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ 'ಹ್ಯಾಪಿಬಿಡೇಮೋದಿಜಿ' ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

ಅದೇ ಮತ್ತೊಂದೆಡೆ, ಕಾಂಗ್ರೆಸ್​ ಪಕ್ಷವು ಮೋದಿ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿವಸ'ವಾಗಿ ಆಚರಿಸುವ ಮೂಲಕ ಮೋದಿ ಪರ ಅಲೆಗೆ ಅಧಿಕೃತ ಪ್ರತ್ಯುತ್ತರ ನೀಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಸರಣಿ ಟ್ವೀಟ್​ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.

ಒಂದು ಟ್ವೀಟ್​ನಲ್ಲಿ, "ಇಂದು ಬೆಳಿಗ್ಗೆ 9.30 ರವರೆಗೆ ಮೋದಿಜಿ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಟ್ವೀಟ್​ಗಳ ಸಂಖ್ಯೆ 199 ಸಾವಿರವಿತ್ತು; ಅದೇ ರಾಷ್ಟ್ರೀಯ ನಿರುದ್ಯೋಗ ದಿನದ ಕುರಿತ ಟ್ವೀಟ್​ಗಳ ಸಂಖ್ಯೆ 879 ಸಾವಿರಕ್ಕೂ ಹೆಚ್ಚಿತ್ತು. ಮೋದಿಜಿ, ನೀವು ನೋಡುತ್ತಿದ್ದೀರಾ, ಅಲ್ವಾ?" ಎಂದು ಶ್ರೀನಿವಾಸ್​ ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, "45 ವರ್ಷಗಳಲ್ಲಿ ಅತಿಕೆಟ್ಟದಾದ ನಿರುದ್ಯೋಗ, 40 ವರ್ಷಗಳಲ್ಲಿ ಅತ್ಯಂತ ಕಡಿಮೆ ಜಿಡಿಪಿ, 14 ವರ್ಷಗಳಲ್ಲಿ ಅತಿಕಡಿಮೆ ಕೃಷಿ ಆದಾಯ, 20 ಲಕ್ಷ ಕೋಟಿ ಜುಮ್ಲಾ ಪ್ಯಾಕೇಜ್​, 150 ಮಿಲಿಯನ್ ನೌಕರಿ ನಷ್ಟ, ಪೆಟ್ರೋಲ್​ಗೆ ಲೀಟರ್​ಗೆ 110 ರೂ., ಡೀಸಲ್​ಗೆ ಲೀಟರ್​ಗೆ 100 ರೂ." ಎಂದು ಪಟ್ಟಿ ಮಾಡಿ, "ಇದಕ್ಕಾಗೇ ದೇಶ #ನ್ಯಾಷನಲ್​ ಅನೆಂಪ್ಲಾಯ್​ಮೆಂಟ್​ಡೇ ಆಚರಿಸುತ್ತಿದೆ" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net