

ಶಿವಮೊಗ್ಗ: ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೀರು ಸರಬರಾಜು ನೌಕರರನ್ನು ಕಾಯಂಗೊಳಿಸಿ ಸಮಾನ ವೇತನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ ನೌಕರರು ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಮಹಾನಗರ ಪಾಲಿಕೆ ಆವರಣದಿಂದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಬಾಲಕಿಯರ ಕಾಲೇಜು, ಗೋಪಿ ವೃತ್ತ, ಬಾಲರಾಜ್ ಅರಸು ರಸ್ತೆ, ಮಹಾವೀರ ವೃತ್ತದ ಮಾರ್ಗವಾಗಿ ಸಾಗಿ ಕೆಇಬಿ ವೃತ್ತದ ಬಳಿ ಇರುವ ನೀರು ಸರಬರಾಜು ಮಂಡಳಿವರೆಗೆ ಧರಣಿ ನಡೆಸಿದರು. ತಮಟೆ ಬಾರಿಸುತ್ತಾ ಸರ್ಕಾರದ ವಿರುದ್ಧ ಕಿಡಿಕಾರುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನೌಕರಿ ಕಾಯಮಾತಿ ಮತ್ತು ಸಮಾನ ವೇತನ ನೀಡಬೇಕು. ದಿನಕ್ಕೆ ಎಂಟು ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ಧ ವೇತನ ನೀಡಬೇಕು. ರಜೆ, ಆರೋಗ್ಯ ವಿಮೆ, ನಿವೃತ್ತ ವೇತನ, ಉಪಧನ ನೀಡುವ ಆದೇಶ ಹೊರಡಿಸಬೇಕು. ಪಿಎಫ್, ಇಎಸ್‌ಐಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ನೀಡಬೇಕೆಂದು ಪಟ್ಟುಹಿಡಿದರು.
ಸಂಘಟನೆ ಅಧ್ಯಕ್ಷ ನಾಗರಾಜ್ ಮಾತನಾಡಿ, ಈ ಹಿಂದೆ ಸರ್ಕಾರವೇ ರಚಿಸಿರುವ ಸಮಿತಿಯ ವರದಿ ಪರಿಗಣಿಸಿಲ್ಲ. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಷ್ಕರ ನಡೆಸುವ ಬಗ್ಗೆ ಕಳೆದ ಫೆ .20ರಂದೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವು. ಆದರೆ ಸಂಘಟನೆ ನೀಡಿದ ಗಡುವು ಮೀರಿದರೂ ಬೇಡಿಕೆ ಈಡೇರಿಸದ ಕಾರಣ ಮುಷ್ಕರ ಆರಂಭಿಸಿದ್ದೇವೆ ಎಂದರು. ಕಾರ್ಯದರ್ಶಿ ಡಿ.ಎನ್.ಕಿರಣ್‌ಕುಮಾರ್, ಉಪಾಧ್ಯಕ್ಷ ಕೆ.ರಘುರಾಂ ಹಾಗೂ ಖಜಾಂಚಿ ವಿನಯ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.