ಬಾಲಕಿ ಮೇಲೆ ಅತ್ಯಾಚಾರ ಗೈದು ಕಲ್ಲಿನಿಂದ ಜಜ್ಜಿ ಕೊಂದು ಗೋಣಿ ಚೀಲದಲ್ಲಿ ಹಾಕಿ ಎಸೆದ ಕಾಮುಕರು

Girl
Published on

ಇಸ್ಲಾಮಾಬಾದ್​: ಆರು ವರ್ಷದ ಬಾಲಕಿಗೆ ಕಿರುಕುಳ ನೀಡಿ, ಅತ್ಯಾಚಾರ ಎಸಗಿದಲ್ಲದೆ ಕಲ್ಲಿನಿಂದ ಜಜ್ಜಿ ಕೊಲೆಗೈದು ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿ ಎಸೆದಿರುವ ಅಮಾನವೀಯ ಘಟನೆ ಪಾಕಿಸ್ತಾನದಲ್ಲಿ ಇದೀಗ ಆಕ್ರೋಶ ಕಿಡಿ ಹೊತ್ತಿಸಿದೆ.

ಬಾಲಕಿಯ ಹೆಸರನ್ನು ಸೀಮಾ ಎಂದು ಗುರುತಿಸಲಾಗಿದೆ. ಉತ್ತರ ಪಾಕಿಸ್ತಾನದ ನವ್ಶೇರಾ ನಗರದ ನಿವಾಸಿ. ಮನೆಯಿಂದ ಹೊರ ಹೋಗಿ ಆಟವಾಡುತ್ತಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಲಾಗಿದೆ.

ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಪಾಲಕರು ಕಂಗಾಲಾಗಿದ್ದಾರೆ. ಬಳಿಕ ಪಾಲಕರ ಪರವಾಗಿ ಮಸೀದಿಯ ಲೌಡ್​ ಸ್ಪೀಕರ್​ನಲ್ಲಿ ಬಾಲಕಿ ನಾಪತ್ತೆಯಾಗಿರುವುದಾಗಿ ಮಾಹಿತಿ ಮುಟ್ಟಿಸಿದ್ದಾರೆ. ಇದನ್ನು ಕೇಳಿಕೊಂಡ ಜನ ಹುಡುಕಾಡಿದಾಗ ಮೈದಾನವೊಂದರಲ್ಲಿ ಗೋಣಿ ಚೀಲದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ.

ಬಳಿಕ ಸ್ಥಳೀಯರು ಗ್ರಾಮಸ್ಥರಿಗೆ ವಿಯಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪರಿಶೀಲಿಸಿದ ಪೊಲೀಸರು ಬಾಲಕಿಯನ್ನು ಕೊಲೆ ಮಾಡುವ ಮುನ್ನ ಆಕೆಗೆ ಕಿರುಕುಳ ನೀಡಿದ್ದಾರೆ. ತಲೆ ಮತ್ತು ದೇಹದ ಇತರೆ ಭಾಗಗಳನ್ನು ಕಲ್ಲಿನಿಂದ ಪದೇಪದೆ ಜಜ್ಜಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಬಾಲಕಿ ತನ್ನ ಸಹೋದರನೊಂದಿಗೆ ಇರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ಹೊರಹಾಕಲಾಗುತ್ತಿದೆ. ಸೀಮಾಳನ್ನು ರೇಪ್​ ಮಾಡಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ನಮ್ಮ ಮಕ್ಕಳಿಗೆ ನಾವು ಸೃಷ್ಟಿಸುತ್ತಿರುವ ವಾತಾವರಣ ಇದೇ ಏನು? ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಟ್ವೀಟ್​ ಮೂಲಕ ಘಟನೆ ಕುರಿತು ಕಿಡಿಕಾರಿದೆ.

ಘಟನೆ ಸಂಬಂಧ ಶಂಕಿತ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ಖಚಿತವಿಲ್ಲ. ಆದರೆ, ಈ ಘಟನೆ ಪಾಕ್​ನಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net