ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪಿ ಜೈಲಿನಿಂದ ಬಿಡುಗಡೆ! ಮಾಧ್ಯಮಗಳಿಗೆ ಆಕೆ ಹೇಳಿದ್ದೇನು?

Greeshma Sharoon
Published on

ತಿರುವನಂತಪುರ: ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಳಿಗೆ ಜಾಮೀನು ಸಿಕ್ಕಿದ್ದು, ಬರೋಬ್ಬರಿ 111 ದಿನಗಳ ಬಳಿಕ ಮಂಗಳವಾರ (ಸೆ. 26) ರಾತ್ರಿ ಜೈಲಿನಿಂದ ಹೊರಬಂದಿದ್ದಾಳೆ.

ಕಿಲ್​ ಲೇಡಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಆಕೆಗೆ ಪ್ರಶ್ನೆಗಳ ಸುರಿಮಳೆಗೈಯಲು ಮಾಧ್ಯಮಗಳು ಮುಂದಾದವು ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿ ಗ್ರೀಷ್ಮಾ ಅಲ್ಲಿಂದ ಹೊರಟಳು. ಮಾವೆಲಿಕ್ಕರ ವಿಶೇಷ ಕಾರಾಗೃಹದಿಂದ ಗ್ರೀಷ್ಮಾ ಬಿಡುಗಡೆಯಾಗಿದ್ದಾಳೆ.

ಗ್ರೀಷ್ಮಾಳ ತಾಯಿ ಮತ್ತು ಅಂಕಲ್​ಗೆ ಈ ಮೊದಲೇ ಜಾಮೀನು ಸಿಕ್ಕಿದೆ. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಚಾರ್ಜ್​ಶೀಟ್ ಸಲ್ಲಿಸಿದ ನಂತರ ಗ್ರೀಷ್ಮಾಗೆ ಜಾಮೀನಿನ ದಾರಿ ತೆರೆಯಿತು. ಜಾಮೀನು ದೊರೆತಿರಬಹುದು ಆದರೆ, ಪ್ರಕರಣದ ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಪ್ರತಿವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಪ್ರಾಸಿಕ್ಯೂಷನ್ ಆಕ್ಷೇಪಿಸಿದರೂ, ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ನೀಡಿದೆ.

ಆರೋಪಿ ಗ್ರೀಷ್ಮಾ, ಬಂಧನವಾದಾಗಿನಿಂದ ಅಟ್ಟಕುಲಂಗರಾ ಮಹಿಳಾ ಜೈಲಿನಲ್ಲಿದ್ದಳು. ಆದರೆ, ಜೈಲಿನಲ್ಲಿ ಆಕೆ ಕಾಟ ಸಹಿಸದೇ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಮಾವೆಲಿಕ್ಕರ ವಿಶೇಷ ಕಾರಾಗೃಹಕ್ಕೆ ಶಿಫ್ಟ್​ ಮಾಡಲಾಗಿತ್ತು. ಬಂಧನದ ಆರಂಭದಲ್ಲೇ ಪೊಲೀಸ್​ ಠಾಣೆಯಲ್ಲೇ ವಿಷ ಕುಡಿದು ಈಕೆ ಭಾರೀ ಹೈಡ್ರಾಮ ಮಾಡಿದ್ದಳು. ಅಲ್ಲದೆ, ಈಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ತುಂಬಾ ಅಪಾಯಕಾರಿಯಾಗಿದೆ. ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದಾಳೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡುವುದು ಡೇಂಜರ್​ ಎಂದು ಪಾರಾಸಾಲ ನ್ಯಾಯಾಲಯದಲ್ಲಿ ವಕೀಲರು ವಾದ ಮಂಡಿಸಿದ್ದರು. ಆದರೆ, ಇದೀಗ ಹೈಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿದ್ದು, ಜೈಲಿನಿಂದ ಬಿಡುಗಡೆಯೂ ಆಗಿದ್ದಾಳೆ.

ಏನಿದು ಪ್ರಕರಣ?

ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್​ ರಾಜ್​ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್​, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಆತ ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿದ್ದಾಳೆ.

ಪ್ರಯತ್ನಗಳು ವಿಫಲವಾದ್ದರಿಂದ ಕೊಲೆ

ಗ್ರೀಷ್ಮಾ 2022ರ ಮಾರ್ಚ್ 4ರಂದು ಯೋಧನೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಬಳಿಕ ಶರೂನ್​ ಜತೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ, ಮೇ ತಿಂಗಳಲ್ಲಿ ಶರೂನ್​ ಮತ್ತೆ ಗ್ರೀಷ್ಮಾಗೆ ಹತ್ತಿರವಾಗಿದ್ದ.​ ಬಳಿಕ ನವೆಂಬರ್‌ನಲ್ಲಿ ಶರೋನ್ ಅವರ ಮನೆಯಲ್ಲಿ ಮತ್ತು ನಂತರ ವೆಟ್ಟುಕಾಡ್ ಚರ್ಚ್‌ನಲ್ಲಿ ವಿವಾಹವಾದರು. ಇದಾದ ಬಳಿಕ ಥ್ರಿಪ್ಪರಪುವಿನಲ್ಲಿ ರೂಮ್​ ಬುಕ್​ ಮಾಡಿ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದರು. ಯೋಧನ ಜತೆ ತನ್ನ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಶರೂನ್​ನಿಂದ ದೂರಾಗಲು ಗ್ರೀಷ್ಮಾ ಬಯಸಿದಳು. ಲವ್​ ಬ್ರೇಕಪ್​ ಮಾಡಿಕೊಳ್ಳಲು ಸಾಕಷ್ಟು ಮನವೊಲಿಸಿದಳು. ಆದರೆ, ಅದಕ್ಕೆ ಆತ ಒಪ್ಪಲಿಲ್ಲ. ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ರಾಜ್​ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಳು. ಆದರೂ ಆತ ಆಕೆಯನ್ನು ಬಿಡಲು ತಯಾರಿರಲಿಲ್ಲ. ತನ್ನೆಲ್ಲ ಪ್ರಯತ್ನಗಳು ವಿಫಲವಾದ್ದರಿಂದ ಅಂತಿಮವಾಗಿ ಕೊಲೆಯನ್ನು ಆಯ್ಕೆ ಮಾಡಿಕೊಂಡಳು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸೆಕ್ಸ್​ಗಾಗಿ ಒತ್ತಾಯ

2022ರ ಅಕ್ಟೋಬರ್​ 13ರಂದು ಇಬ್ಬರು 1 ಗಂಟೆ 7 ನಿಮಿಷಗಳ ಕಾಲ ಸೆಕ್ಸ್​ ಬಗ್ಗೆ ಮಾತನಾಡಿದ್ದಾರೆ. ಸೆಕ್ಸ್​ಗಾಗಿ ಒತ್ತಾಯ ಮಾಡುತ್ತಿದ್ದರಿಂದ ಅಕ್ಟೋಬರ್​ 14ರಂದು ನಾನು ಗ್ರೀಷ್ಮಾ ಮನೆಗೆ ಹೋದೆ ಎಂದು ಶರೂನ್​ ತನ್ನ ಸಂಬಂಧಿಕರ ಮುಂದೆ ಹೇಳಿಕೊಂಡಿದ್ದಾನೆ. ಆಯುರ್ವೇದಿಕ್​ ಔಷಧದಲ್ಲಿ ವಿಷ ಬೆರೆಸಿ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ಆತನೊಂದಿಗೆ ನಡೆಸಿದ್ದ ಚಾಟ್​ ಅನ್ನು ಗ್ರೀಷ್ಮಾ ಡಿಲೀಟ್​ ಮಾಡಿದ್ದಾಳೆ. ಅಳಿಸಿದ ಸಂದೇಶಗಳನ್ನು ಹಿಂಪಡೆಯಬಹುದೇ ಎಂದು ನೋಡಲು ಅವಳು ಹಲವಾರು ಬಾರಿ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿಯೂ ಹುಡುಕಾಡಿದ್ದಾಳೆ.

ಶರೋನ್ ತನ್ನ ಸಾವಿನ ಹೇಳಿಕೆಯಲ್ಲೂ ತನ್ನ ಗೆಳತಿ ಗ್ರೀಷ್ಮಾಳನ್ನು ಅನುಮಾನಿಸಲಿಲ್ಲ. ಪಾರಸಾಲ ಪೊಲೀಸರು ಇದೊಂದು ಸಾಮಾನ್ಯ ಸಾವು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ, ವಿಶೇಷ ತನಿಖಾ ತಂಡ ನಡೆಸಿದ ವಿಚಾರಣೆ ಹಾಗೂ ತನಿಖೆಯ ಬಳಿಕ ಗ್ರೀಷ್ಮಾ ಶರೋನ್‌ಗೆ ಜ್ಯೂಸ್‌ನಲ್ಲಿ ವಿಷ ನೀಡಿ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಎಲ್ಲ ಅಂಶಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದು, ನೆಯ್ಯಟ್ಟಿಂಕರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಗ್ರೀಷ್ಮಾಳನ್ನು ರಕ್ಷಿಸಲು ತಾಯಿ ಮತ್ತು ಆಕೆಯ ಚಿಕ್ಕಪ್ಪ ಪ್ರಯತ್ನಿಸಿದ್ದಾರೆ ಎಂದು ಪೊಲೀಸರಿಗೆ ಗೊತ್ತಾದ ಬಳಿಕ ಅವರನ್ನೂ ಪ್ರಕರಣದಲ್ಲಿ ಬಂಧಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net