More

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದು

    ರಾಜ್ಯದಲ್ಲಿ ನೋಡತಕ್ಕ ಪ್ರವಾಸಿ ಕ್ಷೇತ್ರಗಳಿಗೆ ಬರವಿಲ್ಲ. ವೈವಿಧ್ಯಮಯ ತಾಣಗಳ ಆಗರವೇ ಆಗಿದೆ ಕರ್ನಾಟಕ. ಇದರ ನಡುವೆಯೂ ಹೆಚ್ಚು ಜನಪ್ರಿಯತೆ ಹಾಗೂ ಪ್ರಚಾರ ಸಿಗದ ಪ್ರವಾಸಿ ತಾಣಗಳು ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಅನೇಕ ಪ್ರವಾಸಿ ಸ್ಥಳಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಜಾಗತಿಕ ಪ್ರವಾಸೋದ್ಯಮ ದಿನದ ಹಿನ್ನೆಲೆಯಲ್ಲಿ ಇಂತಹ ಕೆಲವು ಕ್ಷೇತ್ರಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

    ನೋಡಬನ್ನಿ ಚಾಮಡ್ಕ ಜಲಪಾತ

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದುದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಪಂ ವ್ಯಾಪ್ತಿಯ ಕುಕ್ಕುಜಡ್ಕ-ಕಲ್ಮಡ್ಕ ರಸ್ತೆಯಲ್ಲಿ ನಿಸರ್ಗ ರಮಣೀಯ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಚಾಮಡ್ಕ ಜಲಪಾತ ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಆರಾಧಕರನ್ನು ಆಕರ್ಷಿಸುತ್ತಿದೆ. ಬಂಟಮಲೆಯ ಕಡಿದಾದ ಬೆಟ್ಟಗಳ ನಡುವೆ ಹರಿದು ಬರುವ ನೀರು ದೊಡ್ಡ ತೊರೆಯಾಗಿ ಇಲ್ಲಿ ಸಾಗುವ ಪರಿ ಸೊಗಸಾಗಿದೆ. ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ಪ್ರವಾಸಿಗರ ಅನುಕೂಲಕ್ಕಾಗಿ 10 ಲಕ್ಷ ರೂ. ವೆಚ್ಚದಲ್ಲಿ ವೀಕ್ಷಣಾ ಗೋಪುರ, ಫ್ಲಾಟ್​ಫಾಮ್ರ್ ನಿರ್ವಿುಸಿದೆ. ನೀರು ನೆಲ ಸೇರುವ ತಳಭಾಗದವರೆಗೆ ನಡೆದುಕೊಂಡು ಹೋಗಲು ವ್ಯವಸ್ಥೆ ಮತ್ತುಇತರ ಜಲಪಾತಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ ಪ್ರದೇಶ ಎನ್ನುವುದು ಈ ಪ್ರವಾಸಿ ಸ್ಥಳಕ್ಕಿರುವ ಹೆಗ್ಗಳಿಕೆ. ಇತ್ತೀಚಿನ ವರ್ಷಗಳ ತನಕವೂ ಹೆಚ್ಚು ಬೆಳಕಿಗೆ ಬಾರದ ಈ ಜಲಪಾತ ಹೊರ ಜಗತ್ತಿಗೆ ಪರಿಚಯವಾದದ್ದು ಕೋವಿಡ್ ಅವಧಿಯಲ್ಲಿ. ದಕ್ಷಿಣ ಕನ್ನಡದ ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮುಂತಾದ ಕೇಂದ್ರಗಳಿಗೆ ಭೇಟಿ ನೀಡುವ ಜನ ಹುಡುಕಿಕೊಂಡು ಚಾಮಡ್ಕ ಜಲಪಾತ ಕಡೆಗೆ ಬರುತ್ತಿದ್ದಾರೆ. ಚಳಿಗಾಲ ಹಾಗೂ ಮಳೆಗಾಲ ಈ ಪ್ರದೇಶ ಭೇಟಿ ನೀಡಲು ಹೆಚ್ಚು ಪ್ರಶಸ್ತ.

    ಹೀಗಿದೆ ಮಾರ್ಗ: ಮಂಗಳೂರು-ಪುತ್ತೂರು- ಬೆಳ್ಳಾರೆ-ಕುಕ್ಕುಜಡ್ಕ ಮಾರ್ಗವಾಗಿ ಚಾಮಡ್ಕ ಜಲಪಾತ ತಲುಪಬಹುದು (89.7 ಕಿ.ಮೀ.) ಕೊಡಗು- ಸುಳ್ಯ- ಕುಕ್ಕುಜಡ್ಕ ಮಾರ್ಗ (75 ಕಿ.ಮೀ) ದಲ್ಲಿ ಆಗಮಿಸಬಹುದು. ಇಲ್ಲಿಗೆ ಭೇಟಿ ನೀಡುವವರು ಸುಳ್ಯ ತಾಲೂಕಿನ ತೋಡಿಕಾನ ದೇವರಗುಂಡಿ, ಅಮರಮುಡ್ನೂರು ಸಮೀಪದ ಕೆಮನಬಳ್ಳಿ, ಬೆಳ್ತಂಗಡಿಯ ಬಂಡಾಜೆ, ಮಲವಂತಿಕೆ, ದಿಡುಪೆ ಸಮೀಪದ ಜಲಪಾತಗಳಿಗೂ ಮಳೆಗಾಲದಲ್ಲಿ ಭೇಟಿ ನೀಡಬಹುದು.

    ಚಾಲುಕ್ಯರ ಕಾಲದ ದೇವಾಲಯ

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದುಕೊಪ್ಪಳ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು, ಐತಿಹಾಸಿಕ ದೇವಾಲಯಗಳಿವೆ. ದೇವಾಲಯಗಳ ಚಕ್ರವರ್ತಿ ಎಂದೇ ಖ್ಯಾತಿಯಾದ ಕುಕನೂರು ತಾಲೂಕಿನ ಇಟಗಿ ಮಹಾದೇವ ದೇವಾಲಯದ ಬಗ್ಗೆ ಅಷ್ಟಾಗಿ ಜನತೆಗೆ ತಿಳಿದಿಲ್ಲ. ಚಾಲುಕ್ಯರ ಕಾಲದ ಇತಿಹಾಸವಿರುವ ಈ ದೇವಾಲಯ ಸುಂದರ ಕೆತ್ತನೆಗಳನ್ನು ಹೊಂದಿದೆ. ಶಿಲ್ಪಕಲೆ ಕುಸುರಿಗೆ ಸಾಕ್ಷಿಯಾಗಿದ್ದು, ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕೈಗೊಂಡರೂ ಪ್ರಚಾರದ ಕೊರತೆ ಕಾರಣ ಬೆಳಕಿಗೆ ಬಂದಿಲ್ಲ. ವಿಜಯನಗರ ಸಾಮ್ರಾಜ್ಯ ಕಾಲದ ಸುವರ್ಣಗಿರಿ ಆಗಿದ್ದ ಇಂದಿನ ಕನಕಗಿರಿಯಲ್ಲಿ ಐತಿಹಾಸಿಕ ಕನಕಾಚಲಪತಿ ದೇವಾಲಯವಿದೆ. ಪುಷ್ಕರಣಿ, ಲಕ್ಷ್ಮೀದೇವಿ ಕೆರೆ ಇಲ್ಲಿವೆ. ಟಿಪ್ಪು ಸುಲ್ತಾನ್ ವಶದಲ್ಲಿದ್ದ ಕೊಪ್ಪಳ ಕೋಟೆ, ಬಹದ್ದೂರಬಂಡಿ ಕೋಟೆ, ಇರಕಲ್ ಗಡಾ ಕೋಟೆ ಮತ್ತು ಗಂಡುಗಲಿ ಕುಮಾರ ರಾಮನ ಕಮ್ಮಟ ದುರ್ಗ ಬೆಟ್ಟಗಳು ನಾಡಿನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದರೂ ಅವುಗಳ ಮೇಲೆ ಬೆಳಕು ಚೆಲ್ಲುವ, ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗುತ್ತಿಲ್ಲ. ಇಲ್ಲಿಗೆ ತೆರಳಲು ಮಾರ್ಗ, ಸಾರಿಗೆ ಸೌಲಭ್ಯ, ಇತಿಹಾಸ ಪರಿಚಯಿಸುವ ಮಾಹಿತಿಯನ್ನು ಒದಗಿಸುವ ಕೆಲಸವಾಗಬೇಕಿದೆ. ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದಲ್ಲಿ ಕಪಿಲತೀರ್ಥ ಜಲಪಾತ ಇರುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಮಳೆಗಾಲದಲ್ಲಿ ಭೋರ್ಗರೆದು ಹರಿವ ಜಲಪಾತ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳ. ಗುಡ್ಡದಲ್ಲಿ ಜಲಪಾತ ಇದ್ದು, ಅಲ್ಲಿಗೆ ತೆರಳಲು ಸುಗಮ ದಾರಿ ಇಲ್ಲ.

    ವರ್ಣನಾತೀತ ಗೊಡಚಿನಮಲ್ಕಿ ಜಲಪಾತ

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದುಮುಂಗಾರು ವರ್ಷಧಾರೆಗೆ ಗೊಡಚಿನಮಲ್ಕಿ ಜಲಪಾತ ಮೈದುಂಬಿ ಹರಿದರೆ ಕಣ್ಣಾಡಿಸಿದಷ್ಟು ದೂರ ಕರಿ ಬಂಡೆಗಳ ಮೇಲೆ ನೀರ ಅಲೆಗಳನ್ನು ಹೊದ್ದು ಮಲಗಿರುವ ದೃಶ್ಯ ವರ್ಣಾತೀತ. ಆದರೆ, ಮೂಲಸೌಕರ್ಯಗಳಿಲ್ಲದೆ ಪ್ರವಾಸಿ ತಾಣಗಳ ಪಟ್ಟಿಯಿಂದ ದೂರ ಉಳಿದಿದೆ. ಇದು ಮಲೆನಾಡು ಅಲ್ಲ, ಬಟ್ಟಬಯಲು ಪ್ರದೇಶವೂ ಅಲ್ಲದೆ ಕುರುಚಲ ಕಾಡಿನ ಚಿಕ್ಕ ಬೆಟ್ಟಗಳ ಮಧ್ಯದಿಂದ ಹರಿದುಬರುವ, ಮಾರ್ಕಂಡೇಯ ನದಿ ಸೃಷ್ಟಿಸಿರುವ ಜಲಧಾರೆಯೇ ಜಿಲ್ಲೆಯ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಜಲಪಾತ. ಈ ಜಲಪಾತದಲ್ಲಿ ಎರಡು ಹಂತಗಳಿದ್ದು, ಮೊದಲನೆಯದು 25 ಮೀಟರ್ ಮತ್ತು ಎರಡನೆಯದು 18 ಮೀಟರ್ ಎತ್ತರವಿದೆ. ಈ ಜಲಪಾತವು ಎತ್ತರಕ್ಕಿಂತ ಹೆಚ್ಚು ಅಗಲವಾಗಿದ್ದು, ಬಂಡೆಗಲ್ಲುಗಳ ಮೇಲೆ ನೀರು ಹಂತ ಹಂತವಾಗಿ ಜಾರಿದಂತೆ ಇಳಿಯುತ್ತದೆ. ರಸ್ತೆ ಮೂಲಕ ಪ್ರವೇಶಿಸಬಹುದಾದರೂ ಗೊಡಚಿಮಲ್ಕಿ ಹಳ್ಳಿಯಿಂದ ಜಲಪಾತದವರೆಗೆ 2 ರಿಂದ 4 ಕಿಲೋಮೀಟರ್ ಚಾರಣ

    ಕೈಗೊಳ್ಳುವುದು ಜನಪ್ರಿಯ ಚಟುವಟಿಕೆಯಾಗಿದೆ. ಆದರೆ, ಗೋಕಾಕ ಪಟ್ಟಣದಿಂದ ಕೇವಲ 18 ಕಿಮೀ ದೂರದಲ್ಲಿರುವ ಗೋಡಚಿನಮಲ್ಕಿ ಜಲಪಾತ ವೀಕ್ಷಣೆಗಾಗಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ 2001-02ರ ಸಾಲಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ‘ಪ್ರವಾಸಿ ಯಾತ್ರಾ ನಿವಾಸ’ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಸೂಕ್ತ ಸಾರಿಗೆ, ರಸ್ತೆ ಸೌಲಭ್ಯ ಇಲ್ಲ. ಎಲ್ಲ ಖಾಸಗಿ ವ್ಯಕ್ತಿಗಳ ನಿಯಂತ್ರಣದಲ್ಲಿಯೇ ಜಲಪಾತವಿದೆ. ಪ್ರತಿವರ್ಷ ಮಳೆಗಾಲ ಮತ್ತು ಚಳಿಗಾಲ ಆರಂಭವಾಗುತ್ತಿದ್ದಂತೆ ಗೋಡಚಿನಮಲ್ಕಿ ಜಲಪಾತ ನೋಡಲು ನಿತ್ಯ 2 ರಿಂದ 3 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಈ ಪ್ರವಾಸಿಗರಿಗೆ ವಿಶ್ರಾಂತಿ ಮಾಡಲು, ಶೌಚಗೃಹ, ಶುದ್ಧವಾದ ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಯಾವುದೇ ಸೌಲಭ್ಯ ಇಲ್ಲ.

    ಚಾರಣಿಗರ ಹಾಟ್ ಫೇವರಿಟ್

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದುಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ನೆರೆಯ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸುತ್ತಮುತ್ತಲಿನ ಜಿಲ್ಲೆಗಳ ಚಾರಣಿಗರ ಹಾಟ್ ಫೆವರಿಟ್ ಎನಿಸಿದೆ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯಲ್ಲಿನ ಕುಂದಾಣ ಏಕಶಿಲಾ ಬೆಟ್ಟ. ಆದರೆ, ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿ ಗಮನ ಸೆಳೆದಿದ್ದರೂ ನಿರೀಕ್ಷಿತ ಕಾಯಕಲ್ಪವಿಲ್ಲದೆ ತೆರೆಮರೆಗೆ ಸರಿದಿದೆ. ದೇವನಹಳ್ಳಿ ಪಾಳೇಗಾರರ ಕಾಲದ್ದು ಎನ್ನಲಾಗಿರುವ ಈ ಬೆಟ್ಟವನ್ನು ನೋಡಲು ವಾರಾಂತ್ಯದಲ್ಲಿ ನೂರಾರು ಪ್ರವಾಸಿಗರು ಬಂದುಹೋಗುತ್ತಾರೆೆ. ಇತ್ತೀಚೆಗೆ ವಿದೇಶಿ ಪ್ರವಾಸಿಗರನ್ನೂ ಈ ಬೆಟ್ಟ ಆಕರ್ಷಿಸುತ್ತಿದೆ. ಇಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು ಸೇರಿ ಯಾವುದೇ ಮೂಲಸೌಕರ್ಯವಿಲ್ಲ. ಬೆಟ್ಟಕ್ಕೆ ಸಾಗಲು ಕಚ್ಚಾದಾರಿ ಹೊರತುಪಡಿಸಿ ಸಮರ್ಪಕ ಸಂಪರ್ಕ ಸೌಲಭ್ಯವೂ ಇಲ್ಲ. ಬೆಟ್ಟದ ಪೂರ್ವ ಭಾಗದಲ್ಲಿ ಇಳಿಜಾರು ದಾರಿಯಿದ್ದು, ನಾಲ್ಕು ಕಲ್ಲಿನ ಕಂಬದೊಂದಿಗೆ ಪ್ರವೇಶ ದ್ವಾರವಿದೆ. ದೇವನಹಳ್ಳಿ ಪಾಳೆಯಗಾರರ ಕಾಲದ ಚನ್ನರಾಯಸ್ವಾಮಿ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳು ಇವೆ. ಪ್ರಸ್ತುತ ಎರಡೂ ದೇಗುಲಗಳಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ.

    ಕಣ್ಮನ ಸೆಳೆಯುವ ಜೋಗಿಗುಂಡಿ

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದುಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಜಲಪಾತಗಳಿಗೆ ಲೆಕ್ಕವಿಲ್ಲ. ಅನೇಕ ಜಲಪಾತಗಳು ಅಜ್ಞಾತವಾಗಿಯೇ ಉಳಿದುಬಿಡುತ್ತವೆ. ಇನ್ನು ಕೆಲವು ಚಾರಣಿಗರಿಗೆ ಮಾತ್ರ ಪರಿಚಯವಾಗಿರುತ್ತವೆ. ಇಂತಹ ಪಟ್ಟಿಗೆ ಸೇರುವುದು ಆಗುಂಬೆ ಸಮೀಪ ಮಲ್ಲಂದೂರಿನ ಬಳಿ ಒರುವ ಜೋಗಿಗುಂಡಿ. ಆಗುಂಬೆಯಿಂದ ಶೃಂಗೇರಿ ಮಾರ್ಗದಲ್ಲಿ 5 ಕಿಮೀ ಹೋದರೆ ಮಲ್ಲಂದೂರು ಗ್ರಾಮದ ರಸ್ತೆ ಸಿಗುತ್ತದೆ. ಅದರಲ್ಲಿ ಸಲ್ಪ ಮುಂದೆ ಸಾಗಿ ಕಾಡಿನ ದಾರಿಯಲ್ಲಿ ನಡೆದರೆ ದಟ್ಟ ಕಾನನದ ನಡುವೆ ಬೆಳ್ಳಿ ಝುರಿಯಾಗಿ ಜಲಪಾತ ಧುಮ್ಮಿಕ್ಕುತ್ತದೆ. ಇದು ಚಾರಣಿಗರಿಗೂ ಹೇಳಿಮಾಡಿಸಿದ ತಾಣ. ಜನವರಿ ಮಧ್ಯ ಭಾಗದವರೆಗೂ ಇಲ್ಲಿಗೆ ಭೇಟಿ ನೀಡಿದರೆ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಧ್ಯ. ತೀವ್ರ ಮಳೆಗಾಲದ ಸಂದರ್ಭದಲ್ಲಿ ಇಲ್ಲಿಗೆ ತೆರಳುವುದು ತುಸು ಕಷ್ಟವೇ. ದಟ್ಟ ಕಾನನವಾಗಿರುವ ಕಾರಣ ಹೆಚ್ಚು ಸುರಕ್ಷತೆಯೂ ಇರುವುದಿಲ್ಲ. ಇಲ್ಲಿಗೆ ತೆರಳುವ ಮುನ್ನ ಅರಣ್ಯ ಇಲಾಖೆ ಅನುಮತಿ ಪಡೆಯುವುದು ಸೂಕ್ತ.

    ಬಿಸಿಲ ನಾಡಲ್ಲೊಂದು ಭೋರ್ಗರೆವ ಜಲಪಾತ

    ಭೂರಮೆಯ ಸೊಬಗಿನ ತಾಣಗಳು: ವಿಶ್ವ ಪ್ರವಾಸೋದ್ಯಮ ದಿನ ಇಂದುಸುತ್ತಲೂ ಚಾಚಿದ ಹಸಿರು ಹೊದಿಕೆಯ ಗುಡ್ಡಗಾಡು ಪ್ರದೇಶ. ಪ್ರಾಕೃತಿಕ ಸೊಬಗಿನ ಕಾನನದಲ್ಲಿ ಭೋರ್ಗರೆಯುವ ಜಲಪಾತವು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಂಡ್ಲಬಂಡಾ ಹತ್ತಿರ ಇರುವುದು ಜಿಲ್ಲೆಯ ಬಹುತೇಕರಿಗೆ ಗೊತ್ತಿಲ್ಲ. ಬೀದರ್-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಬರುವ ಗುರುಗುಂಟಾ ಬಳಿ ಗೋಲಪಲ್ಲಿ ಸೇತುವೆಯಿಂದ ಮೈಲಿ ದೂರದಲ್ಲಿ ಈ ಜಲಪಾತವಿದ್ದು, ಬೃಹತ್ ಕಲ್ಲು ಬಂಡೆಗಳ ಮೇಲಿನಿಂದ ಹರಿಯುವ ನೀರು ನೋಡಲು ಮನಮೋಹಕವಾಗಿದೆ. ಜಲಪಾತದ ತುದಿಯ ಆರಂಭದಲ್ಲಿ ಕಲ್ಲು ಬಂಡೆಗಳ ಮೇಲಿನಿಂದ ಬೀಳುವ ನೀರು ಕವಲೊಡೆದು ನಂತರ ನಾನಾ ಕಡೆಯಲ್ಲಿ ಹರಿದು ಹೋಗುತ್ತಿದೆ. ಹಳ್ಳದ ನೀರು ಗುಡ್ಡದ ಮೇಲಿನಿಂದ ಹರಿದು ಬರುವ ದೃಶ್ಯ ಮಳೆಗಾಲದಲ್ಲಿ ಆಕರ್ಷಕವಾಗಿ ಕಾಣುತ್ತದೆ. ನೀರು ಕಡಿಮೆ ಇರುವ ಸಂದರ್ಭದಲ್ಲಿ ಗುಡ್ಡದ ತುದಿಯಲ್ಲಿ ನೀರು ಹರಿಯುವ ಸ್ಥಳಕ್ಕೆ ಹೋಗಲು ಅವಕಾಶವಿದ್ದು, ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಗುಡ್ಡದ ಮೇಲೆ ಹೋಗುವುದು ಕೂಡ ಕಷ್ಟಕರವಾಗಿದ್ದು, ಎಚ್ಚರ ತಪ್ಪಿದರೆ ಪ್ರಪಾತಕ್ಕೆ ಬೀಳುವ ಆತಂಕವಿದೆ. ಹೆದ್ದಾರಿಯಿಂದ ಜಲಪಾತಕ್ಕೆ ಹೋಗಲು ಕಾಲು ದಾರಿ ಮಾತ್ರವಿದ್ದು, ಕಾರುಗಳು ಹೋಗುವುದಿಲ್ಲ. ದ್ವಿಚಕ್ರ ವಾಹನಗಳಲ್ಲಿ ಇಲ್ಲವೇ ನಡೆದುಕೊಂಡು ಹೋಗಬೇಕು.

    ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ: ಎಲಾನ್ ಮಸ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts