More

    ಬೆಳವಣಿಗೆಗೆ ವಿಪುಲ ಅವಕಾಶ: ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ, ಆರ್ಥಿಕತೆಗೆ ಕೊಡುಗೆ

    ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ ‘ಒಂದು ರಾಜ್ಯ ಹಲವು ಜಗತ್ತುಗಳು’. ವೈವಿಧ್ಯಮಯ ಆಕರ್ಷಣೀಯ ಪ್ರವಾಸಿ ತಾಣಗಳಿಂದ ಸಂಪದ್ಭರಿತವಾದ ನಾಡು ಕರ್ನಾಟಕ ಎಂಬ ವಾಸ್ತವವನ್ನು ಬಿಂಬಿಸುವ ಹಾಗೂ ಗಮನಸೆಳೆಯುವ ಘೋಷವಾಕ್ಯ ಇದಾಗಿದೆ. ಆದರೆ, ಕಣ್ಮನ ಸೆಳೆಯುವ ಪ್ರವಾಸಿ ತಾಣಗಳಿಗೆಲ್ಲ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ಅಪಾರ ಉದ್ಯೋಗ ಸೃಷ್ಟಿಯ ಅವಕಾಶವಿರುವ ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ರಾಜ್ಯ ಸಫಲವಾಗಿದೆಯೇ ಎಂಬುದು ಮಾತ್ರ ಪ್ರಶ್ನಾರ್ಹವಾಗಿದೆ. ಪ್ರವಾಸೋದ್ಯಮ ಜನಪ್ರಿಯತೆಯಲ್ಲಿ ದೇಶದ ವಿವಿಧ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿರುವುದು ಒಂದಿಷ್ಟು ಸಮಾಧಾನ ತರುವ ಸಂಗತಿಯಾಗಿದೆ.

    ವಿಶ್ವ ಪಾರಂಪರಿಕ ತಾಣಗಳು ಸೇರಿ ಪ್ರಸಿದ್ಧ ಐತಿಹಾಸಿಕ ಸ್ಥಳಗಳು, ಧಾರ್ವಿುಕ ಮಹತ್ವದ ಕ್ಷೇತ್ರಗಳು, ವನ್ಯಜೀವಿ ಅಭಯಾರಣ್ಯಗಳು, ಗಿರಿಧಾಮಗಳು, ಜಲಪಾತಗಳು, ಕಡಲತೀರಗಳು ಹೀಗೆ ವೈವಿಧ್ಯಮಯ ಆಕರ್ಷಕ ಲೋಕಗಳು ಹೇರಳವಾಗಿ ಕರ್ನಾಟಕದಲ್ಲಿ ಲಭ್ಯವಿರುವುದೇ ಈ ಜನಪ್ರಿಯತೆಗೆ ಪ್ರಮುಖ ಕಾರಣವಾಗಿದೆ. ದೇಶದ ಪರಿಸರ ಪ್ರವಾಸಿ ತಾಣಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಭಾರತದಲ್ಲಿರುವ ಸಂರಕ್ಷಿತ ಸ್ಮಾರಕಗಳ ಪೈಕಿ 600ಕ್ಕೂ ಅಧಿಕ ಸ್ಮಾರಕಗಳನ್ನು ಹೊಂದಿರುವ ಕರ್ನಾಟಕವು ಈ ನಿಟ್ಟಿನಲ್ಲಿ ಎರಡನೆಯ ಸ್ಥಾನದಲ್ಲಿದೆ. ಕೆಲ ದಿನಗಳ ಹಿಂದೆ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ ಮಾಡಿರುವುದು ಕರ್ನಾಟಕ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿಯನ್ನು ಮೂಡಿಸಿದೆ.

    ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಒಟ್ಟು ದೇಶೀಯ ಉತ್ಪಾದನೆಗೆ (ಜಿಡಿಪಿ), ಅಂದರೆ ದೇಶದ ಆರ್ಥಿಕತೆ ಇದರ ಕೊಡುಗೆ ಶೇಕಡಾ 6ಕ್ಕಿಂತ ಅಧಿಕ ಎಂಬುದು ಇದರ ಮಹತ್ವವನ್ನು ಸೂಚಿಸುತ್ತದೆ. ದೇಶದಲ್ಲಿ ಶೇಕಡಾ 8ಕ್ಕಿಂತ ಅಧಿಕ ಉದ್ಯೋಗಾವಕಾಶಗಳ ಸೃಷ್ಟಿಗೂ ಈ ವಲಯ ಕಾರಣವಾಗಿದೆ. ಇನ್ನು ರಾಜ್ಯದ ವಿಚಾರಕ್ಕೆ ಬಂದರೆ, ಕರ್ನಾಟಕದ ಒಟ್ಟು ಆರ್ಥಿಕತೆಗೆ ಪ್ರವಾಸೋದ್ಯಮ ವಯಲವು ಶೇಕಡಾ 14ರಷ್ಟು ಕೊಡುಗೆ ನೀಡುತ್ತಿರುವುದು ಹಾಗೂ ಇದರಿಂದ 30 ಲಕ್ಷಕ್ಕೂ ಅಧಿಕ ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿರುವುದು ಮಹತ್ವದ ಸಂಗತಿಯಾಗಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಪ್ರಕಟಿಸಲಾಗಿದೆ. ಪ್ರವಾಸೋದ್ಯಮ ವಲಯವು ಉದ್ಯೋಗಗಳನ್ನು ಸೃಷ್ಟಿಸುವ ಪ್ರಮುಖ ವಲಯವಾಗಿದ್ದು, ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಹಾಗೂ ಸಹಾಯಧನ ಒದಗಿಸಲು ಬಯಸಲಾಗಿದೆ ಎಂದು ವಿವರಿಸಲಾಗಿದೆ. ಆದರೆ, ವಾಸ್ತವದಲ್ಲಿ ಇದೆಷ್ಟು ಕಾರ್ಯಗತವಾಗಿದೆ ಎಂಬುದು ಮಾತ್ರ ಪ್ರಶ್ನಾರ್ಹವಾಗಿದೆ. ಪ್ರವಾಸೋದ್ಯಮ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಸಾಮರ್ಥ್ಯವನ್ನು ಭಾರತ ಹೊಂದಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವದಲ್ಲಿಯೇ ಅತಿ ಜನಪ್ರಿಯ ಪ್ರವಾಸಿ ಕೇಂದ್ರಬಿಂದುವಾಗಿ ಹೊರಹೊಮ್ಮಬಹುದಾಗಿದೆ ಎಂದು ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಅಂದಾಜಿಸಿದೆ.

    ಈಗಾಗಲೇ ವ್ಯಾಪಕ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಿರುವ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಿದರೆ ಮತ್ತಷ್ಟು ಉದ್ಯೋಗಗಳ ಸೃಜನೆಯಾಗುವುದರಲ್ಲಿ ಸಂದೇಹವಿಲ್ಲ. ರಾಜ್ಯದ ಪ್ರವಾಸಿ ತಾಣಗಳ ಸಿರಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸಿ ಪ್ರವಾಸಿಗರನ್ನು ಸೆಳೆಯಲು ನಿರ್ದಿಷ್ಟ ಗುರಿಯುಳ್ಳ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ, ಆಡಳಿತಗಾರರ ಆಸಕ್ತಿ ಅತ್ಯಗತ್ಯ.

    ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ: ಎಲಾನ್ ಮಸ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts