

ಬೆಂಗಳೂರು: ಭಾರತದ ಪವಿತ್ರ ಗ್ರಂಥ ರಾಮಾಯಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ರಾವಣ ಬಹುದೊಡ್ಡ ಶಿವಭಕ್ತನಾಗಿದ್ದ. ಕಠೋರ ತಪ್ಪಸ್ಸು ಮಾಡಿ ಶಿವನ ಆತ್ಮಲಿಂಗವನ್ನು ಪಡೆದುಕೊಂಡಿದ್ದ. ಆದರೆ ಗಣಪತಿಯು ಉಪಾಯವಾಗಿ ಆ ಆತ್ಮಲಿಂಗ ನೆಲವನ್ನು ಸ್ಪರ್ಶಿಸುವಂತೆ ಮಾಡಿದ ಎಂಬೆಲ್ಲ ಅಂಶಗಳನ್ನು ತಿಳಿದುಕೊಂಡಿದ್ದೇವೆ.
ಅಲ್ಲದೆ, ತನ್ನ ತಂಗಿಗೆ ಲಕ್ಷ್ಮಣ ಅವಮಾನಿಸಿದನೆಂದು ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕವಿಮಾನದಲ್ಲಿ ಕರೆದೊಯ್ದು ಲಂಕೆಯ ತನ್ನ ಅರಮನೆಯ ಆವರಣದಲ್ಲಿದ್ದ ಅಶೋಕವನದಲ್ಲಿ ಇರಿಸಿದ್ದ ಎಂಬುದನ್ನು ಓದಿ ತಿಳಿದುಕೊಂಡಿದ್ದೇವೆ. ಹಾಗಾಗಿ ಭಾರತೀಯರ ಪಾಲಿಗೆ ಆತ ಖಳನಾಯಕ ಎಂದೇ ಹೇಳಲಾಗುತ್ತದೆ.
ಆದರೆ, ಶ್ರೀಲಂಕಾದಲ್ಲಿ ರಾವಣನಿಗೆ ಬೇರೆಯದ್ದೇ ವ್ಯಕ್ತಿತ್ವವನ್ನು ಆರೋಪಿಸಲಾಗುತ್ತದೆ. ಆತನೊಬ್ಬ ಅತ್ಯುತ್ತಮ ಆಡಳಿತಗಾರ, ಪ್ರಜಾಸೇವಕನಾಗಿದ್ದ. ತುಂಬಾ ಧರ್ಯಶಾಲಿಯಾಗಿದ್ದ. ಈತ 5 ಸಾವಿರ ವರ್ಷಗಳ ಹಿಂದೆ ಜಗತ್ತಿನ ಮೊಟ್ಟಮೊದಲ ವಿಮಾನ ತಯಾರಿಸಿ, ತಾನೇ ಹಾರಿಸಿಕೊಂಡು ಭಾರತಕ್ಕೆ ಹೋಗಿ ಬರುತ್ತಿದ್ದ ಎಂಬ ನಂಬಿಕೆ ಲಂಕನ್ನರದ್ದಾಗಿದೆ.
ಈ ಹಿನ್ನೆಲೆಯಲ್ಲಿ ರಾವಣನ ಬಗ್ಗೆ ಯಾರಲ್ಲೇ ಆಗಿರಲಿ, ಏನೇ ಮಾಹಿತಿ ಇರಲಿ ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡು ಶ್ರೀಲಂಕಾ ಸರ್ಕಾರ ಜಾಹೀರಾತು ಬಿಡುಗಡೆ ಮಾಡಿದೆ. ಪ್ರವಾಸೋದ್ಯಮ ಮತ್ತು ವಿಮಾನಯಾನ ಇಲಾಖೆ ವತಿಯಿಂದ ಈ ಜಾಹೀರಾತನ್ನು ಬಿಡುಗಡೆ ಮಾಡಲಾಗಿದ್ದು, ರಾವಣನ ಕುರಿತು ಇರಬಹುದಾದ ಪುಸ್ತಕ, ಲೇಖನಗಳು, ದೊರೆತಿರುವ ತಾಳೆಗರಿಗಳು ಇತ್ಯಾದಿಗಳನ್ನು ತಮಗೆ ಒದಗಿಸಿ, ವಿಮಾನ ನಿರ್ಮಾಣದ ಆತನ ಕೌಶಲದ ಅಧ್ಯಯನಕ್ಕೆ ಸಹಕರಿಸಬೇಕು ಎಂದು ಜಾಹೀರಾತಿನಲ್ಲಿ ಕೋರಲಾಗಿದೆ.
ಪುರಾತನ ಕಾಲದಲ್ಲಿ ಗಗನ ಮಾರ್ಗದಲ್ಲಿ ಸಂಚರಿಸಲು ಆತ ಯಾವ ರೀತಿಯ ತಂತ್ರಜ್ಞಾನ ಬಳಸಿದ್ದ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಆತ ಜಗತ್ತಿನ ವೈಮಾನಿಕ ವಿಜ್ಞಾನಿ. ಇದು ಪುರಾಣದ ಕಟ್ಟಕಥೆಯಲ್ಲ. ಬದಲಿಗೆ ವಾಸ್ತವ ಸಂಗತಿ. ಈ ಅಂಶವನ್ನು ಸಾಬೀತುಪಡಿಸಲು ನಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ. ಇನ್ನು ಮುಂದಿನ ಐದು ವರ್ಷಗಳಲ್ಲಿ ಈ ಸತ್ಯವನ್ನು ಸಾಕ್ಷ್ಯಾಧಾರಗಳ ಸಮೇತ ಜಗತ್ತಿಗೆ ತಿಳಿಸುವ ಗುರಿ ನಮ್ಮದಾಗಿದೆ ಎಂದು ಶ್ರೀಲಂಕಾದ ನಾಗರಿಕವ ವಿಮಾನನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದಾನಾತುಂಗೆ ಹೇಳಿದ್ದಾರೆ.
ಶ್ರೀಲಂಕಾ ಸರ್ಕಾರ ಕಳೆದ ವರ್ಷ ನಾಗರಿಕ ವಿಮಾನಯಾನ ತಜ್ಞರು, ಇತಿಹಾಸ ತಜ್ಞರು, ವಿಜ್ಞಾನಿಗಳು ಮತ್ತು ಭೂಗರ್ಭಶಾಸ್ತ್ರಜ್ಞರ ಬೃಹತ್ ಸಮ್ಮೇಳನವನ್ನು ಲಂಕಾದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಂಡರಾನಾಯಿಕೆ ವಿಮಾನ ನಿಲ್ದಾಣದಲ್ಲಿ ಆಯೋಜಿಸಿತ್ತು.
5 ಸಾವಿರ ವರ್ಷಗಳ ಹಿಂದೆ ಶ್ರೀಲಂಕಾದಿಂದ ಭಾರತಕ್ಕೆ ಹಾಗೂ ಭಾರತದಿಂದ ಶ್ರೀಲಂಕಾಕ್ಕೆ ರಾವಣ ವಿಮಾನದಲ್ಲಿ ಸಂಚರಿಸಿದ್ದ ಎಂಬ ಸಂಗತಿಯನ್ನು ಸಮ್ಮೇಳನದಲ್ಲಿ ಇದ್ದವರೆಲ್ಲರೂ ಒಪ್ಪಿಕೊಂಡಿದ್ದರು. ಆದರೆ ಆತ ಸೀತೆಯನ್ನು ಅಪಹರಿಸಿದ್ದ ಎಂಬ ಸಂಗತಿಯನ್ನು ಅಲ್ಲಗಳೆದಿದ್ದು, ಆತನೊಬ್ಬ ಅತ್ಯುತ್ತಮ ರಾಜನಾಗಿದ್ದ, ಅಪ್ರತಿಮ ಸಾಹಸಿಗನಾಗಿದ್ದ ಎಂದು ಪ್ರತಿಪಾದಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ರಾವಣನ ಬಗ್ಗೆ ತಿಳಿದುಕೊಳ್ಳುವ, ಆತನ ಬಗ್ಗೆ ಅಧ್ಯಯನ ಮಾಡುವ ಉತ್ಸಾಹ ಹೆಚ್ಚಾಗುತ್ತಿದೆ. ಶ್ರೀಲಂಕಾ ತನ್ನ ಮೊದಲ ಉಪಗ್ರಹಕ್ಕೂ ರಾವಣನ ಹೆಸರನ್ನು ನಾಮಕರಣ ಮಾಡಿದೆ.