More

    ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಪ್ರತಾಪ್ ಎಸ್ಕೇ‍ಪ್‌! ದಾಖಲಾಯ್ತು ಇನ್ನೊಂದು ಎಫ್‌ಐಆರ್‌!

    ಬೆಂಗಳೂರು: ಇಷ್ಟು ವರ್ಷ ತಾನು ಹೇಳಿದ್ದನ್ನೇ ಎಲ್ಲರೂ ನಂಬುವಂತೆ ಮಾಡಿ ಅನಾಯಾಸವಾಗಿ ತಿರುಗಾಡಿಕೊಂಡಿದ್ದ ಡ್ರೋನ್‌ ಪ್ರತಾಪ್‌ಗೆ ಈಗ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ.

    ಈತನ ‘ಸಾಹಸ’ ಕಂಡು ಯಾರೆಲ್ಲಾ ಈತನನ್ನು ಹಾಡಿ ಹೊಗಳಿದ್ದರೋ, ಅವರೇ ಇದೀಗ ಛೀಮಾರಿ ಹಾಕುವಂಥ ಪರಿಸ್ಥಿತಿ ಎದುರಿಸುತ್ತಿರುವಾಗಲೇ ಇದಾಗಲೇ ಈತನ ವಿರುದ್ಧ ಮೊನ್ನೆಯಷ್ಟೇ ಒಂದು ಎಫ್‌ಐಆರ್‌ ದಾಖಲು ಮಾಡಲಾಗಿದೆ. ಅದರ ಜತೆಗೇ, ಜರ್ಮನಿಯ ಡ್ರೋನ್‌ ಕಂಪೆನಿ ಕೂಡ ಈತನ ವಿರುದ್ಧ ಕೇಸು ದಾಖಲು ಮಾಡಲು ಮುಂದಾಗಿದೆ (ಅದರ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ)

    ಜರ್ಮನಿಯ ಡ್ರೋನ್‌ ಕಂಪೆನಿಯಿಂದಲೂ ಪ್ರತಾಪ್‌ಗೆ ಸುತ್ತಿದೆ ಕಾನೂನು ಕುಣಿಕೆ!

    ಅದರ ಬೆನ್ನಲ್ಲೇ ಇದೀಗ ಮತ್ತೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ಡ್ರೋನ್‌ ಪ್ರತಾಪ್‌ ವಿರುದ್ಧ ದಾಖಲಾಗಿದೆ. ಮೊದಲನೆಯದ್ದು, ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರತಾಪ್‌ ನಿಯಮಾನುಸಾರ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. ಆದರೆ ಅದನ್ನು ಉಲ್ಲಂಘಿಸಿ ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡಲು ಹೋಗಿದ್ದುದು ಹಾಗೂ ಇನ್ನೊಂದು, ಕ್ವಾರಂಟೈನ್‌ಗೆ ಒಳಗಾಗಿರುವ ವ್ಯಕ್ತಿ ಸದಾ ಮೊಬೈಲ್‌ನ್ನು ತನ್ನ ಬಳಿಯೇ ಇಟ್ಟುಕೊಳ್ಳಬೇಕು. ಆದರೆ ಪೊಲೀಸರು ಹುಡುಕಲು ಬಂದಾಗ ಕ್ವಾರಂಟೈನ್‌ ಜಾಗದಲ್ಲಿ ಇಲ್ಲದಿದ್ದ ಪ್ರತಾಪ್‌ ಮೊಬೈಲ್‌ ಅನ್ನು ಬೇರೆಯವರ ಕೈಗೆ ಕೊಟ್ಟು ಹೋಗಿದ್ದುದು!

    ಜುಲೈ 15ರಂದು ಹೈದರಬಾದ್‌ನಿಂದ ಹಿಂದಿರುಗಿದ್ದ ಪ್ರತಾಪ್‌ ಮರುದಿನವೇ ಅಂದರೆ ಜುಲೈ 16ರಂದು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. ಆದರೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಲು ಪ್ರತಾಪ್‌ ಹೋಗಿದ್ದ. ಮಾತ್ರವಲ್ಲದೇ ವಾಹಿನಿಯಲ್ಲಿಯೇ ತನ್ನ ಕೈಗೆ ಹಾಕಿರುವ ಸೀಲ್‌ಗಳನ್ನು ತೋರಿಸಿ ತಾನು ಹೋಂ ಕ್ವಾರಂಟೈನ್‌ನಲ್ಲಿ ಇದ್ದರೂ ಇಲ್ಲಿ ಬಂದಿರುವುದಾಗಿ ಹೇಳಿದ್ದ.

    ‘ಸುದ್ದಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಾಪ್‌, ಹೋಂ ಕ್ವಾರಂಟೈನ್‌ ಮುದ್ರೆ ಸ್ಪಷ್ಟವಾಗಿ ಕಾಣಿಸಿದೆ ಎಂದು ಪಶುವೈದ್ಯ ಮತ್ತು ವಿಧಿವಿಜ್ಞಾನ ತಜ್ಞರೂ ಆಗಿರುವ ಡಾ. ಪ್ರಯಾಗ್‌ ಎಚ್‌.ಎಸ್‌ ತಿಳಿಸಿದ್ದಾರೆ. (ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಮಾಹಿತಿ ನೀಡಲು ಮತ್ತು ದೂರು ದಾಖಲಿಸಲು ಪ್ರಯಾಗ್‌ ಅವರಿಗೆ ಸ್ಥಳಿಯಾಡಳಿತ ಅಧಿಕಾರ ನೀಡಿದೆ).

    ಕ್ವಾರಂಟೈನ್‌ ನಿಯಮ ಉಲ್ಲಂಘನೆ ಮಾಡಿರುವುದು ಸ್ಥಳಿಯಾಡಳಿತಕ್ಕೆ ಗೊತ್ತಾಗಿದೆ ಎಂದು ತಿಳಿಯುತ್ತಲೇ ಪ್ರತಾಪ್‌ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದಾರೆ. ಇದು ಕೂಡ ಕ್ವಾರಂಟೈನ್‌ ನಿಯಮ ಉಲ್ಲಂಘನೆ ಎನಿಸಿಕೊಂಡಿದೆ.
    ಈ ಹಿನ್ನೆಲೆಯಲ್ಲಿ ಪ್ರತಾಪ್‌ ವಿರುದ್ಧ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರತಾಪ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

    ಇದೇ ವೇಳೆ, ಒಂದು ವೇಳೆ ಹೈದರಾಬಾದ್‌ನಿಂದ ಪ್ರತಾಪ್‌ ಏನಾದರೂ ಕರೊನಾ ಸೋಂಕು ಅಂಟಿಸಿಕೊಂಡು ಬಂದಿದ್ದು, ಪಾಸಿಟಿವ್‌ ಎಂದು ಬಂದರೆ ಸಂದರ್ಶನ ನೀಡಿರುವ ಟಿ.ವಿ.ಚಾನೆಲ್‌ನ ಎಲ್ಲಾ ಸಿಬ್ಬಂದಿಯನ್ನೂ ಕ್ವಾರಂಟೈನ್‌ ಮಾಡಬೇಕಾಗುತ್ತದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts