

ಜರ್ಮನಿ: ಯಾವ್ಯಾವುದೋ ಕಂಪೆನಿಗಳು ಮಾಡಿರುವ ಡ್ರೋನ್‌ಗಳನ್ನು ತನ್ನದೇ ಎಂದು ಬಿಂಬಿಸಿ ಹಲವಾರು ವರ್ಷಗಳಿಂದ ಎಲ್ಲರನ್ನೂ ಯಾಮಾರಿಸುತ್ತಾ ಬಂದಿದ್ದ ಡ್ರೋನ್ ಪ್ರತಾಪ್‌ಗೀಗ ದೊಡ್ಡ ಆಘಾತ ಎದುರಾಗಿದೆ.
ಇದಾಗಲೇ ಪೊಲೀಸ್ ಮಹಾ ನಿರ್ದೇಶಕರಿಗೆ ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಾಗಿರುವ ಬೆನ್ನಲ್ಲೇ ಜರ್ಮನಿಯ ಡ್ರೋನ್ ಕಂಪೆನಿ ಕೂಡ ಕೇಸು ಹಾಕುವ ಎಚ್ಚರಿಕೆ ನೀಡಿದೆ.
ಜರ್ಮನ್ ಕಂಪನಿಯಾದ ಬಿಲ್ಜ್ ಐ - ಮಲ್ಟಿಕಾಪ್ಟರ್ಸಿಸ್ಟಮ್ ತಯಾರಿಸಿರುವ ಡ್ರೋನ್ ತಾನೇ ತಯಾರಿಸಿರುವುದಾಗಿ ಪೋಸ್ ನೀಡಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದ ಪ್ರತಾಪ್, ಅದು ತಾನೇ ಮಾಡಿರುವ ಡ್ರೋನ್ ಎಂದು ಎಲ್ಲರನ್ನೂ ಯಾಮಾರಿಸಿದ್ದ. ಸಾಲದು ಎಂಬುದಕ್ಕೆ ತಪ್ಪಾಗಿದ್ದರೆ ಒಪ್ಪಿಕೊಂಡುಬಿಡು ಎಂದು ಮಾಧ್ಯಮಗಳಲ್ಲಿ ಹೇಳಿದಾಗಲೂ, ಅದು ತಾನೇ ಮಾಡಿರುವ ಡ್ರೋನ್ ಎಂದು ಕೇಳಿದ್ದವರ ಬಾಯಿ ಮುಚ್ಚಿಸಿದ.
ಈ ಮಾತುಗಳು ಇದೀಗ ಡ್ರೋನ್ ಪ್ರತಾಪ್ ವಿರುದ್ಧ ಕಾನೂನಿನ ಕುಣಿಕೆಯನ್ನು ಇನ್ನಷ್ಟು ಬಿಗಿ ಮಾಡಿದೆ. ಈ ಕುರಿತು ಜರ್ಮನಿಯ ಬಿಲ್ಜ್ ಐ - ಮಲ್ಟಿಕಾಪ್ಟರ್ಸಿಸ್ಟಮ್ ಡ್ರೋನ್ ಪ್ರತಾಪ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ‘ಇದು ನೀವೇ ತಯಾರಿಸಿರುವ ಡ್ರೋನ್ ಎಂದು ಸಾಬೀತು ಮಾಡಿ, ಇಲ್ಲದೇ ಹೋದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಂಪೆನಿಯ ಮಾಲೀಕ ಬಿಲ್ ಗುಟರ್ ಎಚ್ಚರಿಕೆ ನೀಡಿದ್ದು, ಅದು ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಪ್ರಕಟಿಸಿದೆ.
ಅಂದು ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಾಪ್, ಈ ಡ್ರೋನ್ ಮುಂದೆ ನಿಂತು ತಾವು ಫೋಟೋ ತೆಗೆಸಿಕೊಳ್ಳಬಹುದೇ ಎಂದು ನಮ್ಮ ಅನುಮತಿ ಕೇಳಿದ. ಅದಕ್ಕೆ ನಾವು ಒಪ್ಪಿದೆವು. ಪ್ರತಾಪ್ ಸ್ನೇಹಿತರ ಜತೆ ಬಂದಿದ್ದರು. ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ಹ್ಯಾನೋವರ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಎಲ್ಲಾ ಡ್ರೋನ್‌ಗಳು, ಅದರಲ್ಲೂ ವಿಶೇಷವಾಗಿ ಪ್ರತಾಪ್ ಅವರೊಂದಿಗಿನ ಫೋಟೋದಲ್ಲಿ ಕಂಡುಬರುವ ಬೆಥ್ -01 ಡ್ರೋನ್, ಬಿಲ್ಜ್ ಐ ಇವೆಲ್ಲವೂ ಮಲ್ಟಿಕಾಪ್ಟರ್ ಸಿಸ್ಟಮ್‌ನ ಗುಣಲಕ್ಷಣಗಳಾಗಿವೆ. ಈ ಡ್ರೋನ್‌ನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಅಥವಾ ವಿತರಣೆ ಸಂಪೂರ್ಣ ತಮ್ಮ ಕಂಪೆನಿಗೆ ಸೇರಿದ್ದು, ಇದಕ್ಕೂ ಪ್ರತಾಪ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ಪ್ರತಾಪ್ ತಮ್ಮ ಉದ್ಯೋಗಿಯೂ ಅಲ್ಲ, ಸಹಕಾರ ಪಾಲುದಾರನೂ ಅಲ್ಲ ಅಥವಾ ಬಿಲ್ಜ್ ಐ - ಮಲ್ಟಿಕಾಪ್ಟರ್ ಸಿಸ್ಟಂನ ಷೇರುದಾರ ಕೂಡ ಅಲ್ಲ. ಆದರೂ ಡ್ರೋನ್ ತಯಾರಿಸಿರುವುದು ತಾನೇ ಎಂದು ಹೇಗೆ ಅವರು ಹೇಳುತ್ತಿದ್ದಾರೆ? ಈ ಬಗ್ಗೆ ಸಾಬೀತು ಪಡಿಸಬೇಕು, ಇಲ್ಲದೇ ಹೋದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)