ಯಾಮಾರಿಬಿಟ್ಟೆನಪ್ಪಾ... ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ: ಜಗ್ಗೇಶ್‌ ನೋವಿನ ನುಡಿ

jaggesh-pratap1
Published on

ಬೆಂಗಳೂರು: ಈಗ ಎಲ್ಲೆಲ್ಲೂ ಯುವಕ ಡ್ರೋನ್‌ ಪ್ರತಾಪ್‌ದ್ದೇ ಮಾತು. ಇ-ತ್ಯಾಜ್ಯಗಳಿಂದ ಡ್ರೋನ್‌ ತಯಾರಿಸುವುದಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿರುವುದಾಗಿ ಸುದ್ದಿ ಹಬ್ಬಿಸಿದ್ದ ಈತ ಭಾರಿ ಜನಪ್ರಿಯತೆ ಗಳಿಸಿದ್ದ. 40ಕ್ಕೂ ಅಧಿಕ ದೇಶಗಳಿಗೆ ಹೋಗಿ ವಿಜ್ಞಾನಿಗಳನ್ನು ಭೇಟಿಯಾಗಿರುವುದಾಗಿಯೂ ಹೇಳಿದ್ದ ಈತನ ಬಗ್ಗೆ ಎಲ್ಲೆಡೆಯಿಂದಲೂ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು.

ಆದರೆ ಈ ಯುವಕ ಹೇಳಿದ್ದೆಲ್ಲವೂ ಸುಳ್ಳು. ಇವನು ಎಲ್ಲರನ್ನೂ ಯಾಮಾರಿಸಿದ್ದಾನೆ ಎಂಬ ಗಂಭೀರ ಆರೋಪ ಇದೀಗ ಕೇಳಿಬರುತ್ತಿರುವ ಬೆನ್ನಲ್ಲೇ ನಟ ಜಗ್ಗೇಶ್‌ ಅಕ್ಷರಶಃ ನೊಂದುಕೊಂಡಿದ್ದಾರೆ. ಯಾಮಾರಿಬಿಟ್ಟೆನಪ್ಪಾ... ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಅಷ್ಟಕ್ಕೂ ಯುವ ವಿಜ್ಞಾನಿಯೆಂದೇ ಹೆಸರು ಪಡೆದಿರುವ ಡ್ರೋನ್‌ ಪ್ರತಾಪ್‌ಗೂ, ನಟ ಜಗ್ಗೇಶ್‌ಗೂ ಎತ್ತಣತ್ತ ಸಂಬಂಧ ಎಂದು ಕೇಳಬಹುದು.

ಹೌದು. ಅಸಲಿಯತ್ತು ಏನೆಂದರೆ, ಈ ಯುವಕನನ್ನು ಮೊದಲು ಪರಿಚಯ ಮಾಡಿದ್ದೇ ನಟ ಜಗ್ಗೇಶ್‌. ಸಾಮಾನ್ಯವಾಗಿ ಹಳ್ಳಿ ಹುಡುಗರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಜಗ್ಗೇಶ್‌, ಯಾರೇ ತಮ್ಮ ಮನೆ ಬಾಗಿಲಿಗೆ ಬಂದು ಸಹಾಯ ಕೋರಿದರೆ ಸಹಾಯಹಸ್ತ ಚಾಚುತ್ತಾರೆ. ಇದಾಗಲೇ ಅನೇಕ ಮಂದಿಗೆ ನೆರವು ನೀಡಿದ್ದಾರೆ ಈ ನಟ.

ಆದರೆ ಅವರೇ ಹೇಳುವಂತೆ ತಾವು ಈ ಹಿಂದೆ ಕೂಡ ಕೆಲವು ಸಂದರ್ಭಗಳಲ್ಲಿ ಯಾಮಾರಿದ್ದೇನೆ, ಆದರೆ ಈ ಹುಡುಗನ ವಿಷಯದಲ್ಲಿ ಮಾತ್ರ ನನಗಾಗಿರುವ ನೋವು ಅಷ್ಟಿಷ್ಟಲ್ಲ. ಈತ ಮಾಡಿರುವ ವಂಚನೆಗಳಿಗೆಲ್ಲಾ ನಾನೇ ಹೊಣೆ ಎನ್ನಿಸುತ್ತಿದೆ ಎಂದು ನೋವಿನಿಂದ ನುಡಿದಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಜಗ್ಗೇಶ್ ಅವರೇ ಹೇಳುವಂತೆ, ‘ಸ್ನೇಹಿತರೊಬ್ಬರ ಮನೆಗೆ ಹೋದಾಗ, ಪ್ರತಾಪ್‌ನ ಅಜ್ಜ-ಅಜ್ಜಿ ಸಿಕ್ಕಿದ್ದರು. ತಮ್ಮ ಮೊಮ್ಮಗನನ್ನು ಅಪಾರವಾಗಿ ಹೊಗಳಿದ ಅವರು, ನನ್ನ ಕಾಲು ಹಿಡಿದು ಮೊಮ್ಮಗನಿಗೆ ದಾರಿ ತೋರಿಸಿ, ಹಳ್ಳಿಯ ಹುಡುಗ, ಹೇಗೆ ಮೇಲೆ ಬರಬೇಕು ಎನ್ನುವುದು ಆತನಿಗೆ ಗೊತ್ತಿಲ್ಲ ಎಂದರು. ಗ್ರಾಮೀಣ ಭಾಗದಿಂದ ಬಂದ ಪ್ರತಿಭಾವಂತನಿಗೆ ಏನಾದರೂ ಮಾಡುವ ಎಂದುಕೊಂಡೆ. ನಾನು ಹೇಳಿದಂತೆ ಪ್ರತಾಪ್‌ ನನ್ನನ್ನು ಭೇಟಿಯಾದ. ಅವನ ಮಾತುಗಳಿಗೆ ಬೆರಗಾಗಿಬಿಟ್ಟೆ. ಅವನು ಮೋಸ ಮಾಡುತ್ತಿದ್ದಾನೆ ಎಂಬುದು ಎಳ್ಳಷ್ಟೂ ತಿಳಿಯಲಿಲ್ಲ. ಸೀದಾ ರಿಯಾಲಿಟಿ ಷೋ ಒಂದರಲ್ಲಿ ಸಿಕ್ಕಾಪಟ್ಟೆ ಹೊಗಳಿಬಿಟ್ಟೆ.

ಅದೇ ನನ್ನಿಂದಾದ ದೊಡ್ಡ ತಪ್ಪು. ಆ ಷೋದಿಂದಲೇ ಅವನಿಗೆ ಅದೆಷ್ಟು ಪ್ರಚಾರ ಸಿಕ್ಕಿತೆಂದರೆ ಹೇಳಲು ಸಾಧ್ಯವೇ ಇಲ್ಲ. ಮಾಧ್ಯಮಗಳಲ್ಲಿ, ಸರ್ಕಾರದ ಮಟ್ಟದಲ್ಲಿ, ಮಠಾಧೀಶರಿಂದ ಎಲ್ಲರಿಂದಲೂ ಶ್ಲಾಘನೆಗಳ ಮಹಾಪೂರವೇ ಬಂದುಬಿಟ್ಟಿತು. ಆದರೆ ಅದೇ ಹುಡುಗ ಈ ಪರಿಯಲ್ಲಿ ಮೋಸ ಮಾಡಿದ್ದನ್ನು ಓದಿದಾಗ ನಾನು ಅಪರಾಧಿ ಸ್ಥಾನದಲ್ಲಿ ನಿಂತುಬಿಟ್ಟಿದ್ದೇನೆ. 57ನೇ ವಯಸ್ಸಿಗೆ 22ರ ಹುಡುಗನಿಂದ ಹೊಸ ಪಾಠ ಕಲಿತಿದ್ದೇನೆ. ಈ ನೋವಿನಿಂದ ನನ್ನ ಕಣ್ಣು ಕಿತ್ತರೂ ನಿದ್ರೆ ಬರುತ್ತಿಲ್ಲ. ಕಷ್ಟ ಅಂತ ಬಂದವರಿಗೆ ಭುಜಕೊಡುತ್ತಿದ್ದೆ, ಇನ್ನು ಮುಂದೆ ನನ್ನ ಬಳಿ ಯಾರೇ ಅಪರಿಚಿತರು ಬಂದರೂ ನಂಬುವುದಿಲ್ಲ, ಮೋಸ ಹೋಗಿ ಬಿಟ್ಟೆ’ ಎಂದು ಜಗ್ಗೇಶ್ ಹೇಳಿದ್ದಾರೆ.

ತುತ್ತು ಸಿಕ್ಕರು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು. 57ನೆ ವಯಸ್ಸಿಗೆ ಹೊಸ ಪಾಠ ಕಲಿತೆ ಎಂದು ಹೇಳಿರುವ ಜಗ್ಗೇಶ್, ಕಲಿಯುಗದಲ್ಲಿ ಯಾರನ್ನೂ ನಂಬಬಾರದು ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net