

ತುಮಕೂರು: ಅಭಿವೃದ್ಧಿ ಕಾರ್ಯಕ್ಕಿಂತ ಗ್ಯಾರಂಟಿ ಜಾರಿಗೇ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಇಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯ ತಿಳಿಸಿದರು.
ಗ್ಯಾರಂಟಿ ಅನುಷ್ಠಾನವೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿಡಲು ಆಗಲಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲು 52 ಸಾವಿರ ಕೋಟಿ ರೂ. ಬೇಕಾಗುತ್ತದೆ. ಆದ್ದರಿಂದ ನಾವು ಮಂಡಿಸಿದ್ದ ಬಜೆಟ್ನಲ್ಲಿ ಅಭಿವೃದ್ಧಿ ಕಾರ್ಯದ ಹೊಸ ಕಾಮಗಾರಿಗೆ ಹಣ ನೀಡಲು ಆಗಲಿಲ್ಲ. ಹಳೇ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಚುನಾವಣಾಪೂರ್ವದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಐದು ಭರವಸೆಗಳನ್ನು ನೀಡಿದ್ದು, ಅಧಿಕಾರಕ್ಕೆ ಬಂದರೆ ಅವುಗಳನ್ನು ಗ್ಯಾರಂಟಿ ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಐದು ಗ್ಯಾರಂಟಿಗಳ ಪೈಕಿ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಜಾರಿಗೆ ತಂದಿದ್ದು, ಗೃಹಲಕ್ಷ್ಮಿ ಹಾಗೂ ಯುವನಿಧಿ ಇನ್ನೇನು ಜಾರಿಗೆ ಬರಲಿವೆ.