ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ, ಸಮಾನತೆಗೆ ಉತ್ತೇಜನ, ಬಡವ, ಹಿಂದುಳಿದ ಮತ್ತು ದಲಿತರ ಕಲ್ಯಾಣವು ಸಂವಿಧಾನದ ಪ್ರಮುಖ ಗುರಿಗಳಾಗಿವೆ. ಆಡಳಿತ ರಚನೆಯು ಸಾಂವಿಧಾನಿಕ ಉದ್ದೇಶಗಳನ್ನು ಪೂರೈಸುತ್ತಿದೆಯೇ, ಭವಿಷ್ಯದ ಸವಾಲವನ್ನು ಎದುರಿಸಲು ತಿದ್ದುಪಡಿ ಅಥವಾ ಸುಧಾರಣೆಗಳು ಸಂವಿಧಾನದಲ್ಲಿ ಅಗತ್ಯವಿದೆಯೇ ಎಂಬ ಪರಿಶೀಲನೆಗಳಾಗುತ್ತಿರಬೇಕು. ಏಳು ದಶಕಗಳಲ್ಲಿ 105 ಬಾರಿ ಸಂವಿಧಾನದಲ್ಲಿ ತಿದ್ದುಪಡಿ ತರಲಾಗಿದೆ. ಭೂಸೂಧಾರಣೆ ಕ್ರಮಗಳನ್ನು ಜಾರಿ ಮಾಡಿರುವುದು, ಬ್ಯಾಂಕ್ಗಳ ರಾಷ್ಟ್ರೀಕರಣ, ಹಿಂದಿನ ರಾಜ ಮನೆತನದ ವಾರಸುದಾರರಿಗೆ ಪ್ರೖವಿ ಪರ್ಸ್ ರದ್ದುಗೊಳಿಸುವುದು, ಪಂಚಾಯತ್ ರಾಜ್ ವ್ಯವಸ್ಥೆಯ ಸ್ಥಾಪನೆ ಇತ್ಯಾದಿ ತಿದ್ದುಪಡಿಗಳಿಗೆ ಸಂವಿಧಾನ ಸಾಕ್ಷಿಯಾಗಿದೆ. ಹಾಗಾದರೆ ಮುಂದೇನು? ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಸರ ಸಮಸ್ಯೆ, ಬಹುಭಾಷಾ ಮಧ್ಯಮ ವರ್ಗದ ಅನಿಯಂತ್ರಿತ ಆಕಾಂಕ್ಷೆಗಳು, ನೂರಾರು ವರ್ಷಗಳಿಂದ ನರಳುತ್ತಿರುವ ಬಡವರು, ಹಿಂದುಳಿದವರ ಹತಾಶೆಗಳು, ಕೃತಕ ಬುದ್ಧಿಮತ್ತೆಯಲ್ಲಿನ ವ್ಯಾಪಕ ತಾಂತ್ರಿಕ ಪ್ರಗತಿ ಹೊಂದಿರುವ 21ನೇ ಶತಮಾನದಲ್ಲಿದ್ದೇವೆ. ಅದಕ್ಕೆ ಅನುಗುಣವಾಗಿ ಸಂವಿಧಾನವು ಪ್ರಸ್ತುತತೆಯ ಪರೀಕ್ಷೆ ಎದುರಿಸುತ್ತಿರಬೇಕು.