

ಬೆಂಗಳೂರು: ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾವಯವ ಟಾಸ್ಕ್ ಫೋರ್ಸ್(ಕಾರ್ಯಪಡೆ)ರಚಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.
ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿ ಅಧ್ಯಕ್ಷ ಆನಂದ್ ಉಪ್ಪಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ ಬೆಂಗಳೂರು ಸಾವಯಕ ಕೃಷಿ ರಾಜಧಾನಿ ಎಂದು ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕವೇ ದೇಶದ ಸಾವಯವ ರಾಜಧಾನಿ ಎನ್ನುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ಕಾರ್ಯಪಡೆ ಸಮಿತಿ ರಚಿಸುವಂತೆ ಬಿ.ಸಿ.ಪಾಟೀಲರು ಸೂಚಿಸಿದರು.
ಆನಂದ್ ಉಪ್ಪಳ್ಳಿ ಮಾತನಾಡಿ, ಸಾವಯವ ಕೃಷಿಯನ್ನು ಬೃಹತ್ ಮಟ್ಟದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ರೂಪುರೇಷೆ ತಯಾರಿಸಬೇಕು. ಇದಕ್ಕಾಗಿ ಸಾವಯವ ಟಾಸ್ಕ್ ಫೋರ್ಸ್ ರಚಿಸಬೇಕು ಎಂದರು.